ಮಾನವತಾವಾದದ ತಳಹದಿಯಾಗಿವೆ ವಚನಗಳು

ಸಿರಗುಪ್ಪ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ವೀರಶೈವ ತರುಣ ಸಂಘದಿಂದ ಆಯೋಜಿಸಿದ್ದ ಬಸವ ಸಂದೇಶ ಪ್ರವಚನ ಕಾರ್ಯಕ್ರಮವನ್ನು ಹಾಲ್ವಿ ಅಭಿನವ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು.
ಸಿರಗುಪ್ಪ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ವೀರಶೈವ ತರುಣ ಸಂಘದಿಂದ ಆಯೋಜಿಸಿದ್ದ ಬಸವ ಸಂದೇಶ ಪ್ರವಚನ ಕಾರ್ಯಕ್ರಮವನ್ನು ಹಾಲ್ವಿ ಅಭಿನವ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು.
Published on
ಸಿರಗುಪ್ಪ: ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಪ್ರಾಮಾಣಿಕ ಕಾಯಕ ದೇವರಪೂಜೆಗೆ ಸಮಾನ ಎಂದು ಬಸವಣ್ಣ ಸಂದೇಶ ಸಾರಿದ್ದಾರೆ ಎಂದು ಹಾಲ್ವಿ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.
ಬಸವ ಜಯಂತಿ ಅಂಗವಾಗಿ ಪಟ್ಟಣದ ಶ್ರೀಶೈಲ ಪೀಠದ ಶಿವ ಶಕ್ತಿ ಸಾಂಸ್ಕೃತಿಕ ಭವನದಲ್ಲಿ ವೀರಶೈವ ತರುಣ ಸಂಘದಿಂದ ಆಯೋಜಿಸಿದ್ದ ಬಸವ ಸಂದೇಶ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವೇಶ್ವರ ಜಯಂತಿ ಅಂಗವಾಗಿ ಇಂತಹ ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ ಎಂದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಯಾಣದಲ್ಲಿ ಸಮಾನತೆಯ ಸಂದೇಶ ಸಾರಿದ್ದು, ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಸಮತೋಲನ ಸ್ಥಾಪಿಸಿದರು. ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಅನುಭವ ಮಂಟಪ ಸ್ಥಾಪಿಸಿದರು. ಜಾತಿ, ಲಿಂಗ ಮತ್ತು ವರ್ಗ ತಾರತಮ್ಯವನ್ನು ಕಟುವಾಗಿ ವಿರೋಧಿಸಿ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರಿದರು ಎಂದು ತಿಳಿಸಿದರು.
ಬಸವಣ್ಣ ಅವರ ವಚನಗಳು ಮಾನವನ ಜೀವನಕ್ಕೆ ದಿಕ್ಕು ತೋರಿಸುವಂತಿದ್ದು, ಉತ್ತಮ ಬದುಕಿನ ಮಾರ್ಗ ಸಿಗುತ್ತದೆ. ಇಂತಹ ಪ್ರವಚನ ಕಾರ್ಯಕ್ರಮಗಳು ವಿಶೇಷವಾಗಿ ಯುವಜನತೆಗೆ ಅಗತ್ಯವಾಗಿದ್ದು, ಬಸವ ತತ್ವಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ. ಬಸವಣ್ಣ ಅವರ ವಿಚಾರಗಳು ಇಂದಿನ ಆಧುನಿಕ ಸಮಾಜಕ್ಕೂ ಪ್ರಸ್ತುತವಾಗಿದ್ದು, ಮಾನವತಾವಾದದ ತಳಹದಿಯಾಗಿದೆ ಎಂದರು.
ಬೂದುಗುಂಪಾ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾಮಠದ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ನೀಡಿದರು. ಗುರುಬಸವ ಮಹಾಮಠದ ಬಸವ ಭೂಷಣ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಚನ್ನಬಸವನಗೌಡ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ, ನೇಹಾರಂಗ ಕಲಾತಂಡದ ಅಧ್ಯಕ್ಷ ಆರ್.ಸದಾಶಿವ , ವೀರಶೈವ ತರುಣ ಸಂಘದ ಅಧ್ಯಕ್ಷ ಸುಳವಾಯಿ ಮಲ್ಲಿಕಾರ್ಜುನ, ಕಾರ್ಯದರ್ಶಿ ಲಿಂಗನಗೌಡ, ಆರ್.ಬಸವಲಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net