ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಸಿ

ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕನ್ನಡ ಜಾಗೃತಿ ಸಭೆಯಲ್ಲಿ ಡಿಸಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿದರು. ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕನ್ನಡ ಜಾಗೃತಿ ಸಭೆಯಲ್ಲಿ ಡಿಸಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿದರು. ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಹಿರಾತು
  • ಜಿಲ್ಲಾಮಟ್ಟ
  • ಸಭಾಂಗಣ
ಬಳ್ಳಾರಿ : ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಕಚೇರಿಯ ನಾಮಫಲಕ, ವಾಣಿಜ್ಯ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಶೇ.60 ರಷ್ಟು ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ನಾನಾ ಸ್ಥಳಗಳಲ್ಲಿ ಅಳವಡಿಸುವ ಜಾಹಿರಾತು ಬ್ಯಾನರ್‌ಗಳು ಕನ್ನಡ ಬಳಕೆ, ಪ್ಲಾಸ್ಟಿಕ್ ಗುಣಮಟ್ಟ ವಿವಿಧ ರೀತಿಯಲ್ಲಿ ಪರಿಶೀಲಿಸಿ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬೇಕು. ಹೋಟೆಲ್ ಮತ್ತು ಕಾರ್ಖಾನೆಗಳಲ್ಲಿ ಕನ್ನಡ ನಾಮಫಲಕ ಮತ್ತು ಮಾರ್ಗಸೂಚಿಗಳ ಬಗ್ಗೆ ಪರಿಶೀಲಿಸಬೇಕು. ಕನ್ನಡ ಬಳಕೆ ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಎಲ್ಲ ಇಲಾಖೆಗಳು, ಸಂಘ-ಸಂಸ್ಥೆಗಳು, ವಾಣಿಜ್ಯ ಮತ್ತು ನಿಗಮ ಮಂಡಳಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಪತ್ರ ವ್ಯವಹಾರ ಮಾಡಬೇಕು. ಕನ್ನಡ ಭಾಷೆ ಮತ್ತು ಅನುಷ್ಠಾನದ ಬಗ್ಗೆ ಕನ್ನಡ ಜಾಗೃತಿ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಅಧಿಕೃತವಾಗಿ ವರದಿ ನೀಡಬೇಕು. ಈ ಕಾನೂನನ್ನು ಪಾಲಿಸದೇ ಇರುವ ಇಲಾಖೆಗಳ ವಿರುದ್ಧ ಕ್ರಮವಹಿಸಿ ಎಂದು ಹೇಳಿದರು.ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಬೇಕು. ಮೊದಲ ತ್ರೈಮಾಸಿಕದಲ್ಲಿ ಕನ್ನಡ ಜಾಗೃತಿ ವಾರ ಸಪ್ತಾಹ ಮತ್ತು 15 ದಿನಗಳ ಕನ್ನಡ ಅಭಿಯಾನ ಕೈಗೊಳ್ಳಬೇಕು. ಆಡಳಿತದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನಕ್ಕಾಗಿ ಪರಾಮರ್ಶೆ ನಡೆಸಲು ಪ್ರತಿ ಮೂರು ತಿಂಗಳಿಗೊಮ್ಮೆ ತಾಪಂ ಹಾಗೂ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು, ವಿಚಾರಗೋಷ್ಠಿ, ಕನ್ನಡ ಸಂವಾದ, ವಿಚಾರ ಸಂಕೀರ್ಣ ಮತ್ತು ವಿವಿಧ ಜಯಂತಿ ದಿನಾಚರಣೆಗಳಲ್ಲಿ ನಾನಾ ಸ್ಪರ್ಧೆ ನಡೆಸಿ ಕನ್ನಡ ಪುಸ್ತಕಗಳನ್ನು ನೀಡಲಾಗುತ್ತಿದೆ. ಗಡಿನಾಡು ಪ್ರದೇಶಗಳಲ್ಲಿ ಆಚರಿಸುವ ಕನ್ನಡ ಉತ್ಸವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಧನ ಸಹ ನೀಡಲಾಗುತ್ತಿದ್ದು, ಹೆಚ್ಚಿನ ಕನ್ನಡ ಚಟುವಟಿಕೆ ನಡೆಸಲು ರೂಪುರೇಷೆ ಸಿದ್ಧಪಡಿಸಿ ಹೆಚ್ಚಿನ ಅನುದಾನಕ್ಕಾಗಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕನ್ನಡ ಕಡ್ಡಾಯದ ಸರ್ಕಾರದ ನಿಯಮಾವಳಿಗಳನ್ನು ಅಧಿಕಾರಿಗಳು ಪಾಲಿಸಬೇಕು. ಜಿಲ್ಲೆಯ ಕೈಗಾರಿಕಾ ವಲಯ, ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿ ಅನ್ಯಭಾಷಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸ್ಥಳಿಯ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಭೆಯ ಗಮನಕ್ಕೆ ತಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net