ಪಾವತಿಯಾಗದ 149 ಕೋಟಿ ರೂ.

ಕೆ.ಆರ್. ದೇವರಾಜ್
ಕೆ.ಆರ್. ದೇವರಾಜ್
Published on

ಪ್ರಮುಖ ಮುಖ್ಯಾಂಶಗಳು

  • ಎಂಎಸ್ಪಿ ಯೋಜನೆಯಡಿ ಜೋಳ ಖರೀದಿ
  • ಹಣ ಬಿಡುಗಡೆಗೆ ವಿಳಂಬ
ಬಳ್ಳಾರಿ : ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸರ್ಕಾರ ಖರೀದಿಸಿರುವ ಜೋಳದ ಹಣ ರೈತರ ಖಾತೆಗೆ ಇನ್ನೂ ನೂರರು ಕೋಟಿ ರೂ. ಜಮೆಯಾಗಬೇಕಿದೆ. ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜೋಳ ಕ್ವಿಂಟಾಲ್‌ಗೆ (ಮಾಲ್ದಂಡಿ) 3,749 ರೂ. ಜೋಳ (ಹೈಬ್ರೀಡ್) 3,699 ರೂ. ನಿಗದಿ ಮಾಡಿದೆ. ರೈತರಿಂದ ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್‌ವರೆಗೆ ಖರೀದಿಸಲಾಗಿದೆ. ಜಿಲ್ಲೆಯಲ್ಲಿ 18 ಕಡೆ ಖರೀದಿ ಕೇಂದ್ರಗಳಲ್ಲಿ ಜೋಳ ಖರೀದಿಸಲಾಗಿದೆ. ರೈತರಿಂದ ಖರೀದಿಯಾಗಿರುವ ಜೋಳವನ್ನು ಬಳ್ಳಾರಿ, ಸಿರಗುಪ್ಪ, ಕಂಪ್ಲಿ, ಹೊಸಪೇಟೆ, ಗಂಗಾವತಿಯ ವಡ್ಡರಹಟ್ಟಿಯಲ್ಲಿರುವ ರಾಜ್ಯ ಉಗ್ರಾಣದ ನಿಗಮದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ 8,895 ರೈತರು ಜೋಳ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 8,753 ರೈತರು 4,47,685 ಲಕ್ಷ ಕ್ವಿಂಟಾಲ್ ಜೋಳ ಮಾರಾಟ ಮಾಡಿದ್ದಾರೆ. ಇದರಲ್ಲಿ 6,762 ರೈತರಿಗೆ 130.24 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 1,991 ರೈತರಿಗೆ 35.35 ಕೋಟಿ ರೂ. ರೈತರ ಖಾತೆಗೆ ಜಮೆಯಾಗಬೇಕಿದೆ. ಅದರಂತೆ, ಹಿಂಗಾರು ಹಂಗಾಮಿನಲ್ಲಿ 5,865 ರೈತರು ನೋಂದಾಯಿಸಿದ್ದು, ಈ ಪೈಕಿ 5,687 ರೈತರು 3,05,637 ಲಕ್ಷ ಕ್ವಿಂಟಾಲ್ ಮಾರಾಟ ಮಾಡಿದ್ದು, ಈ ಪೈಕಿ ಒಬ್ಬರ ಖಾತೆಗೂ ಜಮೆಯಾಗಿಲ್ಲ. ಹಿಂಗಾರು ಹಂಗಾಮಿನಲ್ಲಿಯೇ 113.03 ಕೋಟಿ ರೂ. ರೈತರಿಗೆ ಬಿಡುಗಡೆಯಾಗಬೇಕಿದೆ.
ಕೈಯಲ್ಲಿ ಕಾಸಿಲ್ಲ : ಹಿಂಗಾರು ಹಂಗಾಮಿನ ಜೋಳ ಖರೀದಿಗೆ ಎರಡು ತಿಂಗಳ ಮುನ್ನವೇ ರೈತರು ಮುಂಗಾರು ಹಂಗಾಮಿನ ಜೋಳ ಮಾರಾಟ ಮಾಡಿದ್ದಾರೆ. ಈ ಕುರಿತು ಎಲ್ಲರ ರೈತರ ಖಾತೆಗೆ ಜಮೆಯಾಗಿಲ್ಲ. ಜಿಲ್ಲಾದ್ಯಂತ ಮಳೆ ಕೊರತೆ ಹಿನ್ನಲೆ ಕೃಷಿ ಚಟುವಟಿಕೆ ಮಂಕಾಗಿದೆ. ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದ್ದು, ರೈತರ ನಾನಾ ರೀತಿಯ ವ್ಯವಹಾರಗಳಿಗೆ ಕೈ ಸಾಲ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೆ, ಕಳೆದ ಒಂದು ವರ್ಷದ ಹಿಂದಯೇ ರಸಗೊಬ್ಬರ, ಕ್ರಿಮಿನಾಶಕ ಸಿಂಪರಣೆ, ಟ್ರಾೃಕ್ಟರ್ ಬಾಡಿಗೆ, ಕೂಲಿ ಕಾರ್ಮಿಕರು ಹಾಗೂ ಗುತ್ತಿಗೆ ಪಡೆದ ಜಮೀನುಗಳಿಗೆ ಹಣ ಪಾವತಿಸಲು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಳಂಬವಾದರೆ ತಿಂಗಳ ಬಡ್ಡಿಯ ಪಾವತಿಯೂ ಕೂಡ ರೈತರ ಮೇಲೆ ಬೀಳಲಿದೆ.
ಕೃಷಿ ಮಾರಾಟ ಮಂಡಳಿ ಕಳವಳ ! : ರಾಜ್ಯ ಸರ್ಕಾರ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಭತ್ತ, ರಾಗಿ ಹಾಗೂ ಬಿಳಿಜೋಳ ಖರೀದಿಸಿದ ರೈತರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಪಾವತಿಸಲು, ರಾಜ್ಯ ಕೃಷಿ ಮಾರಾಟ ಮಂಡಳಿಯ ಆವರ್ತ ನಿಧಿಯಿಂದ 600 ಕೋಟಿ ರೂ. ಬಿಡುಗಡೆ ಮಾಡಲು ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೈತರ ಬಾಕಿ ಪಾವತಿಗೆ 990 ಕೋಟಿ ರೂ. ಒದಗಿಸುವಂತೆ ಕೋರಿತ್ತು. ಈ ಪ್ರಸ್ತಾಪಕ್ಕೆ ಆರ್ಥಿಕ ಇಲಾಖೆಯೂ ಸಮ್ಮತಿಸಿತ್ತು. ಆದರೆ, ಕೃಷಿ ಮಾರಾಟ ಮಂಡಳಿಯು ಮುಂಗಾರು ಹಂಗಾಮಿನ ಬೆಳೆಗಳ ಬೆಂಬಲ ಬೆಲೆ ಅನುಷ್ಠಾನಕ್ಕೆ 2,692 ಕೋಟಿ ರೂ. ಅಗತ್ಯವಿದೆ ಹಾಗೂ ಸದ್ಯ ಆವರ್ತ ನಿಧಿಯಲ್ಲಿ 819.58 ಕೋಟಿ ರೂ. ಮಾತ್ರ ಲಭ್ಯವಿದೆ ಎಂದು ತಿಳಿಸಿ, ಪೂರ್ಣ ಮೊತ್ತ ಬಿಡುಗಡೆ ಮಾಡಿದರೆ ಅನುಷ್ಠಾನಕ್ಕೆ ಹಣದ ಕೊರತೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿತ್ತು.
"

ಕೋಟ್..ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಎಂಎಸ್ಪಿ ಯೋಜನೆಯಡಿ ಜೋಳ ಖರೀದಿಸಿದ ಕೆಲ ರೈತರಿಗೆ ಹಣ ಪಾವತಿಸಲಾಗಿದೆ. ಉಳಿದ ರೈತರು ಹಾಗೂ ಹಿಂಗಾರು ಹಂಗಾಮಿನ ಹಣ ಇನ್ನೂ ಕೆಲ ದಿನಗಳಲ್ಲೇ ರೈತರ ಖಾತೆಗೆ ಜಮೆಯಾಗಲಿದೆ. - ಕೆ.ಆರ್. ದೇವರಾಜ್, ಉಪ ನಿರ್ದೇಶಕ, ಆಹಾರ ಇಲಾಖೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net