ಬಳ್ಳಾರಿ - ಹೊಸಪೇಟೆ ನಗರಗಳ ನಡುವೆ ಇದೀಗ 65 ಕಿ.ಮೀ. ದೂರದ ಮೂರು ಮತ್ತು ನಾಲ್ಕನೇ ರೈಲ್ವೆ ಮಾರ್ಗವು 2,372 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಹೆಚ್ಚುವರಿಯಾಗಿ ರೈಲ್ವೆ ಲೈನ್ ನಿರ್ಮಿಸುವುದರಿಂದ ಎರಡು ಜಿಲ್ಲೆಗಳ ಮಧ್ಯೆ ಗೂಡ್ಸ್ , ಪ್ರಯಾಣಿಕ ರೈಲುಗಳು ಪ್ರತ್ಯೇಕವಾಗಿ ಸಂಚರಿಸಲಿವೆ. ಇದರಿಂದ ಪ್ರಯಾಣಿಕ ರೈಲುಗಳ ಸಂಖ್ಯೆ ಹೆಚ್ಚುವುದರ ಜತೆಗೆ ಹಂಪಿ, ತುಂಗಭದ್ರ ಜಲಾಶಯ ಸೇರಿ ಪ್ರವಾಸಿ ತಾಣಗಳ ವೀಕ್ಷಿಸಲು ಆಗಮಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ. ಈ ಭಾಗದ ಪ್ರವಾಸಿ ತಾಣಗಳಿಗೆ ಸಂಪರ್ಕ ಸಿಗಲಿದೆ. ಅಲ್ಲದೆ, ಅವಳಿ ನಗರಗಳ ನಡುವೆ ಹೆಚ್ಚುವರಿ ರೈಲ್ವೆ ಲೈನ್ ನಿರ್ಮಿಸುವುದರಿಂದ ಕೈಗಾರಿಕೆ, ಗಣಿಗಾರಿಕೆಗೂ ಅನುಕೂಲವಾಗಲಿದೆ. ಕೈಗಾರಿಕೆಗಳ ಉತ್ಪನಗಳನ್ನು ಬೃಹತ್ ಲಾರಿ ಸೇರಿ ಲಘು ವಾಹನಗಳಲ್ಲಿ ಸಾಗಿಸುತ್ತಿದ್ದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯವೂ ದೂರವಾಗಲಿದೆ. ಸರಕು ಸಾಗಣಿಕೆಯಿಂದ ಕೈಗಾರಿಕೆಗಳಿಗೆ ತಗಲುವ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚುವರಿ ರೈಲ್ವೆ ಲೈನ್ ನಿರ್ಮಾಣದಿಂದ ಹಾಗೂ ಕೈಗಾರಿಕೆ ಉತ್ಪನ್ನಗಳನ್ನು ಗೂಡ್ಸ್ ರೈಲುಗಳಿಂದಲೇ ಸಾಗಿಸುವುದರಿಂದ ಕೈಗಾರಿಕೆಗಳಿಗೆ ವಾರ್ಷಿಕವಾಗಿ 323 ಕೋಟಿ ರೂ. ಉಳಿತಾಯವಾಗಲಿದೆ. ಇದಲ್ಲದೇ, ವಾರ್ಷಿಕವಾಗಿ ಟನ್‌ಗಟ್ಟಲೇ ಉತ್ಪಾದನೆಯಾಗುವ ಇಂಗಾಲದ ಡೈಆಕ್ಸ್‌ಡೈ ಕಡಿಮೆಯಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣಗೊಂಡು ವಾತಾವರಣದಲ್ಲಿ ಸುಸ್ಥಿರತೆ ಕಾಪಾಡಲು ಸಾಧ್ಯವಾಗಲಿದೆ.