ನಗರದ ರಾಘವೇಂದ್ರ ಕಾಲನಿಯ ಎರಡನೇ ಹಂತದ ಬಳಿ ಇರುವ 2.47 ಎಕರೆಯ ಖಾಸಗಿ ಬಡಾವಣೆಗೆ ನೀರು ಮತ್ತು ಒಳಚರಂಡಿ ಸಂಪರ್ಕದ ಎಸ್ಟಿಮೇಟ್ ಮಂಜೂರು ಮಾಡಲು ಸಹಾಯಕ ಇಂಜಿನಿಯರ್ ಅಶೋಕ್, ದೂರುದಾರ ವೀರೇಶ್ ಎಂಬುವವರ ಬಳಿ ಮೊದಲು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಾತುಕತೆ ನಡೆಸಿ 55 ಸಾವಿರ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವೀರೇಶ್ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಚೇರಿಯಲ್ಲಿ ವೀರೇಶ್ ಅವರಿಂದ ಅಶೋಕ್ 55 ಸಾವಿರ ರೂ. ನಗದು ಸ್ವೀಕರಿಸಿದ್ದರು. ಪಡೆದ ಹಣವನ್ನು ಅಶೋಕ್ ಮೇಲಧಿಕಾರಿಯಾದ ಇಇ ಕಾಶಿನಾಥ್ ಅವರಿಗೆ ಪಾಲಿನ ಹಣವನ್ನು ಹಂಚಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇಬ್ಬರನ್ನೂ ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.