ಟಾಪ್ 20ರೊಳಗಿನ ಸ್ಥಾನಕ್ಕೆ ಕಸರತ್ತು

ಕಂಪ್ಲಿ ಷಾ.ಮಿಯಾಚಂದ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಂಡಿರುವುದು.
ಕಂಪ್ಲಿ ಷಾ.ಮಿಯಾಚಂದ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಂಡಿರುವುದು.
Published on
ಬಂಗಿ ದೊಡ್ಡಮಂಜುನಾಥ 
ಕಂಪ್ಲಿ:  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದ 20ರೊಳಗೆ ಸ್ಥಾನ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆ ತಯಾರಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಉಪನ್ಯಾಸಕ ವರ್ಗ ಕಸರತ್ತಿನಲ್ಲಿ ತೊಡಗಿದೆ. 
ಉತ್ತಮ ಫಲಿತಾಂಶ ಸಾಧನೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ಸವಾಲಾಗಿದ್ದು, ಇದಕ್ಕಾಗಿ ಉಪನ್ಯಾಸಕ ವರ್ಗ ನಾನಾ ಕ್ರಮ ಕೈಗೊಂಡಿದೆ. ಬೇರೆ ಕಾಲೇಜುಗಳ ನುರಿತ ಉಪನ್ಯಾಸಕರಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಬೆಳಗ್ಗೆ 8 ಗಂಟೆಯಿಂದ 9 ಗಂಟೆವರೆಗೆ ವಿಶೇಷ ತರಗತಿ ಆಯೋಜಿಸಲಾಗುತ್ತಿದೆ. ಕಾಲೇಜಿನ ಉಪನ್ಯಾಸಕರಿಂದ ಕಲಾ, ವಾಣಿಜ್ಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 3 ಗಂಟೆಯಿಂದ 4.30 ರತನಕ ವಿಷಯವಾರು ಹೆಚ್ಚುವರಿ ವಿಶೇಷ ತರಗತಿ ನಡೆಸಲಾಗುತ್ತಿದೆ. 
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಕೈಬರಹ, ಓದು ಮತ್ತು ಆರ್ಥೈಸಿಕೊಳ್ಳುವಿಕೆ ಮತ್ತು ಸ್ಮರಣೆಯಲ್ಲಿರಿಸಿಕೊಳ್ಳುವ ಕ್ರಿಯೆ ಹೆಚ್ಚಿಸಲು ಉಪನ್ಯಾಸಕ ಪಡೆ ಅವಿರತವಾಗಿ ಶ್ರಮಿಸುತ್ತಿದೆ. ಕಲಿಕೆಯಲ್ಲಿ ಉನ್ನತ, ಸರಾಸರಿ, ಹಿಂದುಳಿದ ವಿದ್ಯಾರ್ಥಿಗಳ ತಂಡ ರಚಿಸಿ ಪ್ರಶ್ನಾಕೋಶ ನೀಡಿ ಉತ್ತರ ಬರೆಯಿಸಿ ಪರೀಕ್ಷೆಗೆ ತಯಾರಿ ಮಾಡಲಾಗುತ್ತಿದೆ. 
ತಿಂಗಳ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಇಬ್ಬರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ನಡವಳಿಕೆ ಸುಧಾರಣೆಗೆ ಸಹಕರಿಸುವಲ್ಲಿ ಪಾಲಕರ ಪೂರ್ಣ ಸಹಕಾರ ದೊರಕುತ್ತಿಲ್ಲ ಎನ್ನುವ ಕೊರಗು ಉಪನ್ಯಾಸಕರನ್ನು ಕಾಡುತ್ತಿದೆ.

ಶೇ.80 ಹಾಜರಾತಿ

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 192 ಪಿಯು ಕಾಲೇಜುಗಳಿದ್ದು, 2 ಕಾಲೇಜುಗಳ ಅನುಮೋದನೆ ಬಾಕಿಯಿದೆ. ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ 25,967 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಪಠ್ಯೇತರ ಕ್ರಮವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ, ಶೈಕ್ಷಣಿಕ ಕ್ರಮ ವಾಗಿ ಪರಿಹಾರ ಬೋಧನೆ, ವಿಶೇಷ ತರಗತಿ ಆಯೋಜನೆ, ವಿದ್ಯಾರ್ಥಿಗಳ ಗುಂಪು ರಚಿಸಿ ಉನ್ನತ ಶ್ರೇಣಿಗೆ ಅಗತ್ಯ ಅಂಕಗಳಿಕೆಗೆ ಪೂರ್ವ ತಯಾರಿ, ಹಾಜರಾತಿ ಹೆಚ್ಚಳಕ್ಕೆ ಕ್ರಮಕೈಗೊಂಡ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಿತ್ಯ ಶೇ.80 ಹಾಜರಾತಿಯಿದೆ. ಈ ಬಾರಿ ರಾಜ್ಯದಲ್ಲಿ 20 ರೊಳಗಿನ ಸ್ಥಾನ ಗಳಿಸುವ ಸಂಕಲ್ಪವಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಲಕ್ಷ್ಮಣ ಹಳ್ಳದಮನಿ ತಿಳಿಸಿದರು.
"

ಪಿಯುಸಿ ಫಲಿತಾಂಶ ಸುಧಾರಣೆಗೆ ಇಲಾಖೆ ಸೂಚಿಸಿರುವ ಎಲ್ಲ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವ ಯತ್ನ ನಿರಂತರ ಸಾಗಿದೆ. ತಾಲೂಕಿನ ಮೂರು ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳನ್ನು ಕ್ರೋಢೀಕರಿಸಿ ವಿಷಯವಾರು ಕಾರ್ಯಾಗಾರ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ.

"

ಮಧ್ಯಂತರ ಪರೀಕ್ಷೆಗಳಲ್ಲಿ ಶೇ.98 ಫಲಿತಾಂಶ ಬಂದಿದೆ. ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕ ವರ್ಗ ಹಾಗೂ ಪಾಲಕರು ಸಮನ್ವಯ ಸಾಧಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net