122 ಸೆಕೆಂಡ್ ಕಾಯುವ ಶಿಕ್ಷೆ : ನಗರದ ನಾನಾ ವೃತ್ತಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದೆ. ಇಲ್ಲಿನ ದುರ್ಗಮ್ಮ ವೃತ್ತದಲ್ಲಿ ವೃತ್ತದಿಂದ ಗಡಗಿ ಚನ್ನಪ್ಪ ವೃತ್ತದ ಕಡೆಗೆ ಸಂಚರಿಸುವ ರಸ್ತೆಯ ಸಿಗ್ನಲ್ ಸಮಯವನ್ನು 90 ಸೆಕೆಂಡ್‌ನಿಂದ 122 ಸೆಕೆಂಡ್ಸ್‌ಗೆ ಹೆಚ್ಚಿಸಲಾಗಿದೆ. ಇನ್ನೂ ಇದೇ ವೃತ್ತದಿಂದ ಮೋಕಾ ಹಾಗೂ ಸಿರಗುಪ್ಪ ರಸ್ತೆ ಕಡೆ ಸಂಚಾರಿಸುವ ಸಿಗ್ನಲ್‌ಗಳಿಗೆ 60 ಸೆಕೆಂಡ್ಸ್ ಕಾಯಬೇಕು. ಇದರಿಂದ, ನೆತ್ತಿ ಸುಡುವ ಬಿಸಿಲಿನಲ್ಲಿ ಎರಡು ನಿಮಿಷಗಳ ಕಾಲ ಬೈಕ್ ಸವಾರರು ನಿಲ್ಲುವುದು ನರಕಯಾತನೆಯಾಗಿ ಪರಿಣಮಿಸಿದೆ. ಮಹಾನಗರ ಪಾಲಿಕೆಯು ಸವಾರರ ಹಿತದೃಷ್ಟಿಯಿಂದ ಹಸಿರು ಹೊದಿಕೆ (ಗ್ರೀನ್ ಮ್ಯಾಟ್) ಅಳವಡಿಸಿದೆಯಾದರೂ, ಅದು ಎಲ್ಲ ಸವಾರರಿಗೆ ಆಶ್ರಯ ನೀಡಲು ಸಾಕಾಗುತ್ತಿಲ್ಲ. ಸ್ಥಳದ ಅಭಾವದಿಂದಾಗಿ ಅರ್ಧದಷ್ಟು ಸವಾರರು ಬಿಸಿಲಿನಲ್ಲಿಯೇ ಕಾಯಬೇಕಿದೆ. ಇತ್ತ ಸಂಗಮ್ ವೃತ್ತದಲ್ಲಿ ನಾಲ್ಕು ಕಡೆ ಸಿಗ್ನಲ್ ಅಳವಡಿಸಲಾಗಿದೆಯಾದರೂ, ಅದು ಯಾವುದೇ ವೈಜ್ಞಾನಿಕ ಮಾನದಂಡಗಳನ್ನು ಹೊಂದಿಲ್ಲ ಎಂಬುದು ಸಾರ್ವಜನಿಕರ ದೂರು. ಸಿಗ್ನಲ್‌ಗಳ ಅಸಮರ್ಪಕ ನಿರ್ವಹಣೆಯಿಂದಾಗಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಕೆಲವೊಮ್ಮೆ ಸಿಗ್ನಲ್‌ಗಳು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುವುದರಿಂದ ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿದೆ.