ರಾಷ್ಟ್ರೀಯ ಭದ್ರತೆಗೆ ಧಕ್ಕೆ

ಜಿ.ಸೋಮಶೇಖರರೆಡ್ಡಿ
ಜಿ.ಸೋಮಶೇಖರರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕರಿಗೆ ಒಂದೇ ಪೌರತ್ವ
ಬಳ್ಳಾರಿ : ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ಅಧಿಸೂಚನೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಅತಂಕಕಾರಿ ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಭಾರತದ ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸಿರುವಾಗ, ರಾಜ್ಯ ಸರ್ಕಾರವು ಶಾಶ್ವತ ನಿವಾಸಿ ಎಂಬ ಪ್ರತ್ಯೇಕ ವರ್ಗ ಸೃಷ್ಟಿಸಲು ಮುಂದಾಗಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು ಕಿಡಿಕಾರಿದರು. ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಈ ರೀತಿಯ ವರ್ಗೀಕರಣವು ಸಂವಿಧಾನದ ಸಮಾನತೆಯ ಹಕ್ಕು ಕಲ್ಪಿಸುವ 14ನೇ ವಿಧಿ ಉಲ್ಲಂಘಿಸುವಂತಿದ್ದು, ಕಾನೂನುಬದ್ಧ ಉದ್ದೇಶವಿಲ್ಲದ ಕ್ರಮವಾಗಿದೆ ಎಂದು ಟೀಕಿಸಿದರು.
ಪ್ರಮಾಣಪತ್ರ ವಿತರಣೆಗೆ ಕಂದಾಯ ಅಧಿಕಾರಿಗಳು ನಿವಾಸ ಹಾಗೂ ಸ್ಥಳೀಯ ಪರಿಶೀಲನೆ ಮಾತ್ರ ಆಧಾರವಾಗಿಟ್ಟುಕೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತೀಯ ಪೌರತ್ವ ಸಮರ್ಥ ಕೇಂದ್ರ ಸಂಸ್ಥೆಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಅಕ್ರಮ ವಲಸಿಗರು ಅಥವಾ ವಿದೇಶಿ ಪ್ರಜೆಗಳು ಕೂಡ ಸುಳ್ಳು ದಾಖಲೆಗಳ ಮೂಲಕ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯುವ ಅಪಾಯವಿದೆ ಎಂದು ಎಚ್ಚರಿಸಿದರು.
ಒಮ್ಮೆ ಪ್ರಮಾಣಪತ್ರ ಪಡೆದ ಬಳಿಕ ಸರ್ಕಾರಿ ಯೋಜನೆಗಳು, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದು ಅಕ್ರಮ ವಾಸವನ್ನೇ ಕಾನೂನುಬದ್ಧಗೊಳಿಸಬಹುದಾದ ಸಾಧ್ಯತೆಯಿದೆ. ಇದು ಅಕ್ರಮ ವಲಸಿಗರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂದರು. ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸಬೇಕು. ಅಲ್ಲಿಯವರೆಗೆ ಅಧಿಸೂಚನೆಯ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net