ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಉದ್ಘಾಟಿಸಿದರು. ಕುಲಸಚಿವ ಪ್ರೊ.ಎನ್.ಎಂ.ಸಾಲಿ, ಪ್ರೊ.ರಾಬರ್ಟ್ ಜೋಸ್, ಕಲಾವಿದ ಲಕ್ಷ್ಮೀನಾಥ ಗೌಡ, ಪ್ರೊ.ಶಾಂತ ನಾಯ್ಕ ಇತರರಿದ್ದರು.
ಬಳ್ಳಾರಿ : ವಿಶ್ವದೆಲ್ಲೆಡೆ ಶಾಂತಿ ಬಯಸುವುದು ರಂಗಭೂಮಿಯ ಮುಖ್ಯ ಧ್ಯೇಯವಾಗಿದೆ ಎಂದು ಮೈಸೂರಿನ ರಂಗನಿರ್ದೇಶಕ ಡಾ.ಸಿ.ಬಸಲಿಂಗಯ್ಯ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ವಿವಿಯ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗಭೂಮಿಯ ಉಳಿವಿನ ಸವಾಲುಗಳು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಫೇಲಾದವರೆ ಮಹಾನ್ ವ್ಯಕ್ತಿಗಳಾಗಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ. ರಂಗಭೂಮಿ ಒಂದು ಮುಕ್ತ ವಿಶ್ವವಿದ್ಯಾಲಯವಾಗಿದ್ದು, ರಂಗಭೂಮಿಗೆ ಅಳಿವಿಲ್ಲ. ಅದು ಕಲೆಗಳ ಸಾರವನ್ನು ಹೊಂದಿದೆ. ಜೀವನದ ಮೇಲೆ ಆಳವಾದ ಪ್ರಭಾವ ಬೀರುವಂತವಾಗಿದೆ ಎಂದರು.
ಧಾರವಾಡದ ಹಿರಿಯ ರಂಗಕರ್ಮಿ ಡಾ.ಶಶಿಧರ್ ನರೇಂದ್ರ ಮಾತನಾಡಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಕೆಗೆ ಪ್ರತಿಯೊಂದಕ್ಕೆ ಆಜ್ಞೆ ನೀಡಬೇಕಾಗುತ್ತದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗ ಪರಂಪರೆಯನ್ನು ಆಧುನಿಕತೆಗೆ ಒಳಪಡಿಸುವ ಕ್ರಮವಾಗಿದೆ ಎಂದು ಹೇಳಿದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ ಮುನಿರಾಜು ಮಾತನಾಡಿ, ಒತ್ತಡದ ಜೀವನದಲ್ಲಿ ನಾಟಕಗಳು ತುಂಬಾ ಪ್ರಭಾವ ಬೀರುತ್ತವೆ. ಕಲಾವಿದರು ಹಲವಾರು ವರ್ಷಗಳ ಶ್ರಮದಿಂದ ಪ್ರತಿಭೆಗೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಒತ್ತಡ ಹೋಗಲಾಡಿಸಬಹುದು ಎಂದರು.