ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಕಾಂಗ್ರೆಸ್, ಇದೀಗ ಮತ್ತೆ ಏಕೆ ಸಂಪುಟಕ್ಕೆ ಸೇರಿಸಿಕೊಂಡಿದೆ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಪ್ರಶ್ನಿಸಿದರು.
ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ 187 ಕೋಟಿ ರೂ. ಅಲ್ಲ, 87 ಕೋಟಿ ರೂ. ಅಕ್ರಮ ನಡೆದಿದೆ ಎಂಬುದಾಗಿ ತಿಳಿಸುವ ಜತೆಯಲ್ಲಿ ಸಚಿವ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದರು. ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದರಿಂದ ಈ ನಡುವೆ ಏನು ಬದಲಾಗಿದೆ ಎಂದರು.
ಕಳ್ಳತನವಾದ ಹಣವನ್ನು ವಾಪಸ್ ಪಡೆದರೆ ಕಳ್ಳತನವೇ ನಡೆದಿಲ್ಲ ಎಂದರ್ಥವೇ? ಹಣ ವಸೂಲಿ ಆಗಿದೆ ಎಂಬ ಕಾರಣಕ್ಕೆ ಪ್ರಕರಣ ಮುಗಿದಿಲ್ಲ. ಈ ಹಣ ತೆಲಂಗಾಣ, ಗೋವಾ ಹಾಗೂ ಸಂಡೂರು ಸೇರಿದಂತೆ ನಾನಾ ಚುನಾವಣೆಗಳಲ್ಲಿ ಬಳಕೆಯಾಗಿದೆ ಎಂದು ಆರೋಪಿಸಿದರು. ಜತೆಗೆ ಯಾವ ಶಾಸಕರಿಗೆ ಎಷ್ಟೆಷ್ಟು ಹಣ ಹಂಚಿಕೆಯಾಗಿದೆ ಎಂಬುದರ ಲೆಕ್ಕ ಬಹಿರಂಗಪಡಿಸುವೆ ಎಂದರು.
ನಿಗಮ ಹಣಕಾಸು ವ್ಯವಹಾರಗಳ ಬಗ್ಗೆ ನಾಗೇಂದ್ರ ಅವರಿಗೆ ಮಾಹಿತಿಯಿತ್ತು. ಜತೆಗೆ ಇಲಾಖೆಯ ಎಂಡಿಯೇ ನಾಗೇಂದ್ರ ಅವರೇ ಎಲ್ಲವೂ ಮಾಡಿದ್ದಾರೆ ಎಂದು ಹೇಳಿರುವುದಾಗಿ ಆರೋಪಿಸಿದ್ದಾರೆ. ತಮ್ಮ ಪ್ರಾಣಕ್ಕೆ ತೊಂದರೆಯಾದರೆ ಅದಕ್ಕೆ ನಾಗೇಂದ್ರ ಅವರೇ ಹೊಣೆ ಎಂದು ಕೂಡ ಹೇಳಿದ್ದಾರೆ ಎಂದರು.
ಅಕ್ರಮ ಗಣಿಗಾರಿಕೆ ಆರೋಪದಡಿ ನಾನು ಮತ್ತು ಬಿ.ನಾಗೇಂದ್ರ ಜೈಲಿನಲ್ಲಿದ್ದಾಗ ಸಿಬಿಐ ಕೆಟ್ಟದ್ದು ಎಂದು ಹೇಳುತ್ತಿದ್ದರು. ಈಗ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಆರೋಪಿಸುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಮೂಲಕ ನನ್ನನ್ನು ಬಂಧಿಸಿದಾಗ ಸಿಬಿಐ ಒಳ್ಳೆಯದಾಗಿತ್ತೇ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲ. ಸರ್ಕಾರಿ ಜಮೀನು ಕಬಳಿಕೆ ಮಾಡಿಲ್ಲ. ಇದು ಖಾಸಗಿ ವ್ಯಕ್ತಿಗಳ ನಡುವಿನ ಜಮೀನು ವಿವಾದವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಸಮರ್ಥಿಸಿಕೊಂಡರು.