ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಸಿದ್ದೇಶ್ವರ ಗುಡ್ಡದಲ್ಲಿ ಪರಿವರ್ತನಾ ಸಂಸ್ಥೆ ಹಾಗೂ ತುಮಕೂರಿನ ವಿಜ್ಞಾನ ಕೇಂದ್ರದಿಂದ ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೂವಿನಹಡಗಲಿ: ಮಕ್ಕಳಿಗೆ ಆಕಾಶ ಕಾಯಗಳು, ಗ್ರಹಗಳು, ನಕ್ಷತ್ರಗಳು ಹಾಗೂ ನಕ್ಷತ್ರಮಂಡಲಗಳ ಕುರಿತು ಮಾಹಿತಿ ನೀಡಬೇಕಾದ ಅವಶ್ಯವಿದೆ ಎಂದು ತುಮಕೂರಿನ ವಿಜ್ಞಾನ ಕೇಂದ್ರದ ಖಗೋಳ ತಜ್ಞ ರವಿಶಂಕರ್ ಎಸ್. ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹೊಳಗುಂದಿ ಗ್ರಾಮದ ಸಿದ್ದೇಶ್ವರ ಗುಡ್ಡದಲ್ಲಿ ಪರಿವರ್ತನಾ ಸಂಸ್ಥೆ ಹಾಗೂ ತುಮಕೂರಿನ ವಿಜ್ಞಾನ ಕೇಂದ್ರದಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಗ್ರಹಗಳ ಚಲನೆ, ಚಂದ್ರನ ಮೇಲ್ಮೈ ವಿನ್ಯಾಸ ನಮ್ಮಲ್ಲಿ ಕುತೂಹಲ ಮೂಡಿಸುತ್ತವೆ. ಸೂರ್ಯನ ಚಲನದಿಂದ ಭೂಮಿಯ ಒಂದು ಭಾಗದಲ್ಲಿ ಕತ್ತಲು ಮತ್ತೊಂದು ಭಾಗದಲ್ಲಿ ಬೆಳಕು ಆವರಿಸಿಕೊಳ್ಳುತ್ತದೆ. ಕತ್ತಲಿನಲ್ಲಿ ನಕ್ಷತ್ರ ಸೇರಿದಂತೆ ಇತರ ಗ್ರಹಗಳು ಗೋಚರಿಸುತ್ತವೆ ಎಂದರು.
ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಾಲ್ಕು ದೂರದರ್ಶಕಗಳ ಸಹಾಯದಿಂದ ಚಂದ್ರನ ಮೇಲ್ಮೈಯಲ್ಲಿನ ಕುಳಿಗಳು, ಗುರುಗ್ರಹ ಮತ್ತು ಅದರ ಉಪಗ್ರಹಗಳು, ಶುಕ್ರ ಗ್ರಹದ ಪ್ರಕಾಶಮಾನತೆ ಹಾಗೂ ಕೆಲವು ಪ್ರಸಿದ್ಧ ನಕ್ಷತ್ರಮಂಡಲಗಳನ್ನು ವೀಕ್ಷಿಸಿದರು.