ಸಂಘಟನೆಗೆ ಪ್ರೇರಣೆ ನೀಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವ

ಕಂಪ್ಲಿಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾಥಿಗಳನ್ನು ಗೌರವಿಸಲಾಯಿತು.
ಕಂಪ್ಲಿಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾಥಿಗಳನ್ನು ಗೌರವಿಸಲಾಯಿತು.
Published on
ಕಂಪ್ಲಿ: ಭಾರತೀಯರಲ್ಲಿ ಸ್ವಾತಂತ್ರ್ಯ ಗಳಿಸುವ ಕಿಚ್ಚನ್ನು ಹೆಚ್ಚಿಸಿ, ಸಂಘಟನೆಗೆ ಪ್ರೇರಣೆ ನೀಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಪತ್ರಿಕೆಗಳು ಮಾಹಿತಿ ನೀಡುವ ಮಾಧ್ಯಮವಷ್ಟೇ ಅಲ್ಲ. ಜನಸಾಮಾನ್ಯರ ಪ್ರತಿಧ್ವನಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ನವಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಮಾತನಾಡಿ, ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಸುಳ್ಳು ಸುದ್ದಿ ಹರಡಬಾರದು. ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಎಡಿಟೋರಿಯಲ್ ಅಂಕಣ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಭಾಷಾಜ್ಞಾನ, ಬರವಣಿಗೆ ಕೌಶಲ ಗಳಿಸಲು ಸಾಧ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಬಳ್ಳಾರಿಯಲ್ಲಿ ಮಂಗಳೂರು ಸಮಾಚಾರ ಮುದ್ರಣದೊಂದಿಗೆ ರಾಜ್ಯದಲ್ಲಿ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆ ಆರಂಭಗೊಂಡಿತು. ಪತ್ರಕರ್ತರು ಸುದ್ದಿ ಪ್ರಕಟಿಸುವ ಮುನ್ನ ಪರಿಶೀಲಿಸಬೇಕು. ನಿಖರ ಮತ್ತು ವಸ್ತುನಿಷ್ಠ ಸುದ್ದಿ ನೀಡುವುದು ಪತ್ರಕರ್ತರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.
ತಾಲೂಕು ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಬೈಲ್ ಮತ್ತು ಪತ್ರಿಕೆಗಳನ್ನು ಸದ್ಭಳಕೆ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಹುದ್ದೆಗಳಿಸಲು ಸಹಕರಿಯಾಗುತ್ತದೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿ.ಸಾಯಿನಿಧಿ, ಆರ್.ಹರ್ಷಿಣಿ, ವಿನುತಾ ಸೊಪ್ಪಿಮಠ, ನಸ್ರೀನ್ ತಾಜ್, ಅಭಿನಂದನ್, ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಂ.ಶರಣಬಸವರಾಜರನ್ನು ಗೌರವಿಸಲಾಯಿತು. ಪ್ರಾಚಾರ್ಯೆ ರೋಹಿಣಿ ಸಾಯಿಕಿಶೋರ್, ಅಧಿಕಾರಿಗಳಾದ ಬಸವರಾಜ, ಶಂಭುಲಿಂಗ, ಗುರುಪ್ರಸಾದ್, ಟಿ.ಎಂ.ಬಸವರಾಜ, ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಸದಸ್ಯ ಜಿ.ಚಂದ್ರಶೇಖರಗೌಡ, ತಾಲೂಕು ಕಾರ್ಯದರ್ಶಿ ಪಿ.ವೀರೇಶ್, ಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net