ಮೈ ಕೊರೆಯುವ ಚಳಿಗೆ ಜನರು ಥಂಡಾ Freezing COLD

ಹೊಸಪೇಟೆಯಲ್ಲಿ ಮಂಜು ಕವಿದ ವಾತಾವರಣದಲ್ಲಿ ಜನರು ವಾಹನಗಳಲ್ಲಿ ತೆರಳುತ್ತಿರುವುದು.
ಹೊಸಪೇಟೆಯಲ್ಲಿ ಮಂಜು ಕವಿದ ವಾತಾವರಣದಲ್ಲಿ ಜನರು ವಾಹನಗಳಲ್ಲಿ ತೆರಳುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
  • ಬೆಚ್ಚಗಿನ ಬಟ್ಟೆ ಹಾಕಿದರೂ ಬೆಂಬಿಡದೆ ಕಾಡುತ್ತಿರುವ ಥಂಡಿ
  • ಚಳಿಯಿಂದ ಪಾರಾಗಲು ಬೆಂಕಿ ಕಾಯಿಸಲು ಮುಂದು
ಹೊಸಪೇಟೆ: ಕಳೆದ ಮೂರು ವಾರದಿಂದ ಜಿಲ್ಲಾದ್ಯಂತ ಮೈ ಕೊರೆಯುವ ಚಳಿಯಿಂದಾಗಿ ಜನರು ಅಕ್ಷರಶಃ ನಡುಗುತ್ತಿದ್ದಾರೆ. ಬೆಚ್ಚಗಿನ ಬಟ್ಟೆ ಹಾಕಿದರೂ ಬೆಂಬಿಡದೆ ಕಾಡುತ್ತಿರುವ ಥಂಡಿ ವಾತಾವರಣದಿಂದ ಜನರು ಕಂಗಾಲಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಭೂಮಿ ಸಂಪೂರ್ಣ ತಂಪುಗೊಂಡಿದ್ದು, ತಂಪು ಗಾಳಿಯೊಂದಿಗೆ ಚಳಿ ಹೆಚ್ಚಾಗಿ ಜನರು ನಡುಗುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಚಳಿ ಆರಂಭವಾಗುತ್ತಿದೆ. ರಾತ್ರಿಯಿಂದ ಬೆಳಗ್ಗೆ 10 ಗಂಟೆವರೆಗೂ ಚಳಿ ಇದ್ದು, ಕಳೆದ ಕೆಲ ದಿನಗಳಿಂದ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ನಸುಕಿನ ಜಾವ ಬೀಳುವ ಇಬ್ಬನಿಯಿಂದಾಗಿ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುವಂತಾಗಿದೆ. ಮೈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಬೆಚ್ಚಗಿನ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜನರು ಚಳಿಯಿಂದ ಪಾರಾಗಲು ಬೆಂಕಿ ಕಾಯಿಸತೊಡಗಿದ್ದಾರೆ.
ಚಳಿಯಿಂದಾಗಿ ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಎಚ್ಚರಿಕೆ ವಹಿಸಬೇಕು. ಜನರು ಆದಷ್ಟು ಬೆಚ್ಚಗಿನ ಉಡುಪುಗಳನ್ನು ಧರಿಸಬೇಕೆಂಬುದು ವೈದ್ಯರ ಸಲಹೆಯಾಗಿದೆ.

ದಿನೇದಿನೆ ಮೈ ಕೊರೆಯುವ ಚಳಿ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಬೆಚ್ಚಗಿನ ಉಡುಪುಗಳನ್ನು ಧರಿಸಿಕೊಳ್ಳಬೇಕು. ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net