ಪುರಸಭೆಗೆ ₹23.90 ಕೋಟಿ ಆದಾಯ ನಿರೀಕ್ಷೆ

ಕುರುಗೊಡು ಪುರಸಭೆಯಲ್ಲಿ ಸೋಮವಾರ ಅಧ್ಯಕ್ಷ ಟಿ. ಶೇಖಣ್ಣ ಆಯ-ವ್ಯಯ ಮಂಡಿಸಿದರು. ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ ಇದ್ದರು.
ಕುರುಗೊಡು ಪುರಸಭೆಯಲ್ಲಿ ಸೋಮವಾರ ಅಧ್ಯಕ್ಷ ಟಿ. ಶೇಖಣ್ಣ ಆಯ-ವ್ಯಯ ಮಂಡಿಸಿದರು. ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ ಇದ್ದರು.
Published on
ಕುರುಗೊಡು: ಪಟ್ಟಣದ ಪುರಸಭೆಯಲ್ಲಿ ಸೋಮವಾರ ಅಧ್ಯಕ್ಷ ಟಿ. ಶೇಖಣ್ಣ ಅವರು 45.30 ಲಕ್ಷ ರೂ. ಉಳಿತಾಯದ ಆಯ-ವ್ಯಯವನ್ನು ಮಂಡಿಸಿದರು.
ಬಜೆಟ್‌ನಲ್ಲಿ ಆಸ್ತಿ ತೆರಿಗೆ, ಖಾತಾ ಬದಲಾವಣೆ ಶುಲ್ಕ, ನೀರು ಸರಬರಾಜು, ಕಟ್ಟಡ ಪರವಾನಗಿ, ಮಾರುಕಟ್ಟೆ, ಜಾಹೀರಾತು, ಟ್ರೇಡ್ ಲೈಸನ್ಸ್ ಸೇರಿದಂತೆ ವಿವಿಧ ಶುಲ್ಕಗಳಿಂದ ಒಟ್ಟು 23.90 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ವೆಚ್ಚದ ಭಾಗವಾಗಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಿಗೆ 2.75 ಕೋಟಿ ರೂ., ವಿದ್ಯುತ್ ಕಾಮಗಾರಿಗೆ ಒಂದು ಕೋಟಿ ರೂ., ರುಧ್ರಭೂಮಿ ಅಭಿವೃದ್ಧಿ, ಕುರುಗೊಡು ಉತ್ಸವ, ಜಾತ್ರೆ, ಶುದ್ಧ ಕುಡಿವ ನೀರಿನ ಘಟಕ ದುರಸ್ತಿ ಸೇರಿದಂತೆ ವಿವಿಧ ಯೋಜನೆಗಳಿಗೆ 23.45 ಕೋಟಿ ರೂ. ಮೀಸಲಿಡಲಾಗಿದೆ ಎಂದು ಶೇಖಣ್ಣ ಹೇಳಿದರು.
ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ಅನೇಕ ಕಾರ್ಯಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಟೆಂಡರ್ ಪ್ರಕ್ರಿಯೆ ಇಲ್ಲದೆ ಬೀದಿದೀಪ ಅಳವಡಿಸಿರುವುದು ಸರಿಯೇ ಎಂಬ ಆರೋಪ ಇತರ ಸದಸ್ಯರಿಂದ ಕೇಳಿಬಂದಿತು. ಮಧ್ಯಪ್ರವೇಶಿಸಿದ ಶೇಖಣ್ಣ, ಈ ವಿಷಯವನ್ನು ನನ್ನ ಗಮನಕ್ಕೆ ತರಬೇಕಿತ್ತು ಎಂದು ಪ್ರತಿಕ್ರಿಯಿಸಿದರು.
ಇದರಿಂದ ಅಸಮಾಧಾನಗೊಂಡ ಸದಸ್ಯ ನರಸಪ್ಪ, ನಾವು ಕೂಡ ಜನರಿಂದಲೇ ಆಯ್ಕೆಯಾಗಿದ್ದೇವೆ. ಅಧಿಕಾರಿಗಳು ನೀಡುವ ಟೀ-ಬಿಸ್ಕೆಟ್‌ಗಾಗಿ ಇಲ್ಲಿಗೆ ಬಂದಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ಅಥವಾ ನಿರ್ಣಯ ಕೈಗೊಳ್ಳುವಾಗ ಎಲ್ಲ ಸದಸ್ಯರ ವಿಶ್ವಾಸ ಪಡೆಯಬೇಕು. ಪಟ್ಟಣದಲ್ಲಿ ಕುಡಿವ ನೀರಿನ ಘಟಕಗಳು ಹಾಳಾಗಿದ್ದು, ಬಜೆಟ್‌ನಲ್ಲಿ ಮಾತ್ರ ಹಣ ಕಾಣಿಸುತ್ತಿದೆ, ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ನಾಗಭೂಷಣ, 14ನೇ ವಾರ್ಡಿನಲ್ಲಿ ಒತ್ತುವರಿ ಭೂಮಿ ತೆರವು ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿಳಂಬ ಧೋರಣೆಯಿಂದ ಜನರು ನನ್ನ ಮೇಲೆ ಹಣ ಪಡೆದು ಸುಮ್ಮನಾಗಿರುವ ಆರೋಪ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ, ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪಿನ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೇಸಿಗೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿವ ನೀರಿಗೆ ಹಣ ಮೀಸಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ, ಪಟ್ಟಣದ ಆರು ವಾರ್ಡುಗಳಲ್ಲಿ ನೀರಿನ ಸಮಸ್ಯೆ ಇದೆ. ಬಜೆಟ್‌ನಲ್ಲಿ ನೇರವಾಗಿ ಹಣ ಮೀಸಲಿಲ್ಲ, ಆದರೆ ಕೇರ್ ಸಿಟಿ ಯೋಜನೆಯಡಿ ಒಂಬತ್ತು ಲಕ್ಷ ರೂ. ಅನುದಾನ ಒದಗಿಸುವಂತೆ ಡಿಸಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಶೇಖಣ್ಣ, ಪಟ್ಟಣದಲ್ಲಿ ಮೊದಲ ಬಾರಿಗೆ ಉತ್ಸವ ಆಚರಣೆ ಮಾಡಲಾಗುತ್ತಿದ್ದು, ಕುಡಿವ ನೀರು, ಸ್ವಚ್ಛತೆ, ಅಲಂಕಾರ ಸೇರಿದಂತೆ ಎಲ್ಲ ಜವಾಬ್ದಾರಿಗಳೂ ಪುರಸಭೆಯ ಮೇಲಿದೆ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net