ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಮೈನವಿರೇಳಿಸಿದ ಶಸ್ತ್ರ ಪವಾಡ

ಮೈಲಾರದದಲ್ಲಿ ಗುರುವಾರ ದೇವಸ್ಥಾನದ ಆವರಣದಲ್ಲಿ ಕಂಚಾವೀರರಿಂದ ಭಗಣಿಗೂಟ ಪವಾಡ ನಡೆಯಿತು.
ಮೈಲಾರದದಲ್ಲಿ ಗುರುವಾರ ದೇವಸ್ಥಾನದ ಆವರಣದಲ್ಲಿ ಕಂಚಾವೀರರಿಂದ ಭಗಣಿಗೂಟ ಪವಾಡ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಂಚಾವೀರರಿಂದ ಕಬ್ಬಿಣದ ಸರಪಳಿ ಹರಿಯುವ ಸಾಹಸ ಪ್ರದರ್ಶನ
  • ಭಕ್ತರ ಸಮ್ಮುಖದಲ್ಲಿ ಜರುಗಿದ ಭಗಣಿಗೂಟ ಪವಾಡ
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರನ ಜಾತ್ರೆಯ ವಿಶೇಷತೆಗಳಲ್ಲಿ ಒಂದಾದ ಕಂಚಾವೀರರ ಶಸ್ತ್ರ ಪವಾಡವು ಗುರುವಾರ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮ ದೇವಸ್ಥಾನದ ಆವರಣದಲ್ಲಿ ಜರುಗಿತು. ಕಂಚಾವೀರರಿಂದ ನಡೆದ ವಿವಿಧ ಶಸ್ತ್ರ ಪವಾಡ ಮತ್ತು ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮಗಳು ಭಕ್ತರ ಮೈನವಿರೇಳಿಸುವ ಮೂಲಕ ಸ್ವಾಮಿ ಪವಾಡಕ್ಕೆ ಸಾಕ್ಷಿಯಾದವು.
ಇದನ್ನೂ ಓದಿ...
ಜಾತ್ರೆಯ ನಾಲ್ಕನೇ ದಿನವಾದ ಗುರುವಾರ ದೇವಸ್ಥಾನದ ಆವರಣದಲ್ಲಿ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಕಂಚಾವೀರರಿಂದ ವಿವಿಧ ರೀತಿಯ ಶಸ್ತ್ರ ಪವಾಡ ಮತ್ತು ಕಬ್ಬಿಣದ ಸರಪಳಿ ಹರಿಯುವ ಪವಾಡಗಳು ವಿಜೃಂಭಣೆಯಿಂದ ನಡೆದವು. ಈ ಪವಾಡ ಮಾಡುವ ಕಂಚಾವೀರರ ವಂಶಸ್ಥರಲ್ಲಿ ಸರದಿಯ ಪ್ರಕಾರ ವರ್ಷಕ್ಕೆ ಒಂದು ಮನೆಯವರಂತೆ ಪವಾಡಗಳನ್ನು ನೆರವೇರಿಸುತ್ತಾ ಬಂದಿದ್ದಾರೆ.
ಕಂಚಾವೀರರು ಕಾಲಿನಲ್ಲಿ ಭಗಣಿ ಗೂಟವನ್ನು ಬಡಿದುಕೊಂಡು ಆ ರಂಧ್ರದ ಮೂಲಕ ಹಗ್ಗ ಹಾಗೂ ಮುಳ್ಳಿನ ಕಂಟೆಯನ್ನು ದಾಟಿಸುವ ಪವಾಡ ಮಾಡಿದರು. ಈ ದೃಶ್ಯ ನೋಡುಗರ ಮೈ ರೋಮಾಂಚನವೆನಿಸುವಂತಿತ್ತು. ನೆರೆದ ಸಹಸ್ರಾರು ಭಕ್ತರು ಏಳು ಕೋಟಿಗೋ.. ಏಳು ಕೋಟಿಗೋ.. ಚಾಂಗಬಲೋ.. ಎಂದು ಹರ್ಷೋದ್ಗಾರ ಕೂಗಿದರು.
ನಂತರ ಕಾಲಿನಲ್ಲಿ ಸುಮಾರು ಐದು ಅಡಿ ಉದ್ದದ ದಪ್ಪನೆಯ ಕಬ್ಬಿಣದ ಸರಳು ದಾಟಿಸುವ ಮೂಲಕ ಶಸ್ತ್ರ ಪವಾಡ ಮಾಡಿದರು. ಬಳಿಕ ಮುಂಗೈಯಲ್ಲಿ ಶಸ್ತ್ರ ಚುಚ್ಚಿಕೊಂಡು ಆರತಿ ಬೆಳಗುವ ಪವಾಡ ನಡೆಸಿ, ದಪ್ಪನೆಯ ಕಬ್ಬಿಣದ ಸರಪಳಿಯನ್ನು ಕಟ್ಟೆಗೆ ಕಟ್ಟಿ ಒಂದೇ ಬಾರಿಗೆ ಜಗ್ಗಿ ಹರಿಯುವ ಪವಾಡ ಮಾಡಿದರು.
ಕಂಚಾವೀರರು ಹಾಗೂ ಬಾಬುದಾರರು ಮತ್ತು ಇತರರು ಸ್ವಾಮಿಗೆ ಸೇವೆ ಸಲ್ಲಿಸಿದರು. ಮಾಲತೇಶ, ವಸಂತ, ನೀಲಪ್ಪ, ಚೇತನ್, ಭಗವಂತ್, ಅನಿಲ್ ದಳವಾಯಿ ಸೇರಿದಂತೆ ಇತರ ಬಾಬುದಾರರು ಪವಾಡಗಳನ್ನು ನಡೆಸಿದರು. ಇದರೊಂದಿಗೆ ವಾರದಿಂದ ಕ್ಷೇತ್ರದಲ್ಲಿ ನಡೆದುಕೊಂಡು ಬಂದ ಮೈಲಾರ ಜಾತ್ರೆಗೆ ತೆರೆಬಿದ್ದಿತು. ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವನು ಮೈಲಾರಲಿಂಗನ ರೂಪದಲ್ಲಿ ಡೆಂಕನ ಮರಡಿಯಲ್ಲಿ (ಮಣಿಚೂಲ ಪರ್ವತದಲ್ಲಿ) ಅಡಗಿಕುಳಿತ ರಕ್ಕಸರನ್ನು ಸಂಹರಿಸಿ ವಿಜಯ ಸಾಧಿಸಿದ ನೆನಪಿಗಾಗಿ ಕಾರ್ಣಿಕದ ಶುಭ ನುಡಿಯನ್ನು ನುಡಿದ ಮರುದಿನ ದೇವಸ್ಥಾನದ ಆವರಣದಲ್ಲಿ ಸರಪಳಿ ಮತ್ತು ಭಗಣಿಗೂಟ ಪವಾಡಗಳು ನಡೆಯುವುದು ಪರಂಪರೆಯ ರೂಢಿಯಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net