ಸಾಮಾಜಿಕ ಸಮಾನತೆ ಅಡಿಪಾಯ

ಬಳ್ಳಾರಿಯಲ್ಲಿ ಆಯೋಜಿಸಿದ್ದ ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿದರು. ಮೇಯರ್ ಪಿ.ಗಾದೆಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎ.ಕೆ.ಜಲಾಲಪ್ಪ, ಎಡಿಸಿ ಮಹಮ್ಮದ್ ಎನ್.ಜುಬೇರ್, ಡಿ.ದೇವರಾಜ ಅರಸು ವೇದಿಕೆಯ ಜಿಲ್ಲಾಧ್ಯಕ್ಷ ಕಲ್ಲುಕಂಭ ಪಂಪಾಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು.
ಬಳ್ಳಾರಿಯಲ್ಲಿ ಆಯೋಜಿಸಿದ್ದ ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿದರು. ಮೇಯರ್ ಪಿ.ಗಾದೆಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎ.ಕೆ.ಜಲಾಲಪ್ಪ, ಎಡಿಸಿ ಮಹಮ್ಮದ್ ಎನ್.ಜುಬೇರ್, ಡಿ.ದೇವರಾಜ ಅರಸು ವೇದಿಕೆಯ ಜಿಲ್ಲಾಧ್ಯಕ್ಷ ಕಲ್ಲುಕಂಭ ಪಂಪಾಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಿ.ಡಿ.ದೇವರಾಜ ಅರಸು ಜಯಂತಿ ಆಚರಣೆ
  • ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿಕೆ

ಬಳ್ಳಾರಿ :

ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಭೂಮಿಯ ಹಕ್ಕು ನೀಡಿ, ಬಡತನ ನಿರ್ಮೂಲನೆಗೆ ಮತ್ತು ಸಾಮಾಜಿಕ ಸಮಾನತೆಗೆ ಅಡಿಪಾಯ ಹಾಕಿದ ಮಹಾನ್ ನಾಯಕ ದಿವಂಗತ ಡಿ.ದೇವರಾಜ ಅರಸು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿನೋಬಾ ಭಾವೆಯವರ ಭೂದಾನ ಚಳವಳಿಯ ಪ್ರೇರಣೆಯೊಂದಿಗೆ ಅರಸು ಅವರು ಉಳುವವನೇ ಒಡೆಯ ಎಂಬ ಐತಿಹಾಸಿಕ ಭೂಸುಧಾರಣಾ ಕಾಯ್ದೆ ಜಾರಿಗೆ ತಂದರು. ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯದ ಆಶಯವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವಜನರು ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥವಾಗಿ ಸಮಯ ಕಳೆಯುವುದನ್ನು ನಿಲ್ಲಿಸಬೇಕು. ಮೊಬೈಲ್ ವ್ಯಾಮೋಹದಿಂದ ಹೊರಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ನಾಯಕರ ಅಧ್ಯಯನ ಶೀಲತೆ ಮಾದರಿಯಾಗಿಟ್ಟುಕೊಂಡು, ಜ್ಞಾನವರ್ಧಕ ಕೃತಿಗಳ ಓದುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಮೇಯರ್ ಪಿ.ಗಾದೆಪ್ಪ ಮಾತನಾಡಿ, ದಿವಂಗತ ದೇವರಾಜ ಅರಸು ಅವರು ಅಂದಿನ ಕಾಲದಲ್ಲೇ ಸಮಾಜದ ವಿರೋಧವನ್ನು ಎದುರಿಸಿ, ಹಿಂದುಳಿದ ವರ್ಗಗಳ ಪರವಾಗಿ ದಿಟ್ಟ ಕಾಯ್ದೆಗಳನ್ನು ಜಾರಿಗೆ ತಂದರು. ಅವರ ಪರಿಕಲ್ಪನೆಯ ವಸತಿ ನಿಲಯಗಳು ಮತ್ತು ರಾಜಕೀಯ ಮೀಸಲಾತಿಯ ಫಲವಾಗಿಯೇ ಇಂದು ತಳಸಮುದಾಯಗಳ ಲಕ್ಷಾಂತರ ಜನರು ಜನಪ್ರತಿನಿಧಿಗಳಾಗಿ, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಕರ್ನಾಟಕದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಜಾರಿಗೆ ತಂದ ಉಳುವವನೇ ಹೊಲದೊಡೆಯ (ಭೂಸುಧಾರಣಾ ಕಾಯ್ದೆ) ಕ್ರಾಂತಿಕಾರಿ ಹೆಜ್ಜೆಯನ್ನು ಅವರು ಸ್ಮರಿಸಿದರು. ಶೋಷಿತರಿಗೆ ಭೂಮಿಯ ಒಡೆತನ ನೀಡಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಅರಸು ಅವರ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನವೇ ನಮ್ಮ ಅತ್ಯುನ್ನತ ಶಕ್ತಿ. ಶ್ರಮಜೀವಿಗಳಾಗಿ ಶ್ರಮಪಟ್ಟರೆ ಸಂವಿಧಾನ ನೀಡಿರುವ ಉನ್ನತ ಹುದ್ದೆಗಳನ್ನು ಪ್ರತಿಯೊಬ್ಬರೂ ಅಲಂಕರಿಸಲು ಸಾಧ್ಯ. ವಿದ್ಯಾರ್ಥಿಗಳು ಕೇವಲ ಅದೃಷ್ಟವನ್ನು ನಂಬದೆ ಕಠಿಣ ಪರಿಶ್ರಮ, ನಿರಂತರ ಅಧ್ಯಯನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಭಾಷ ಅವರು ದಿವಂಗತ ಡಿ.ದೇವರಾಜು ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಸ್ತಿ ವಿತರಣೆ ಮಾಡಲಾಯಿತು. ಇದಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಇದೇ ವೇಳೆ ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net