ಒಣಗಿದ ನದಿ : ತುಂಗಭದ್ರ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸದ ಪರಿಣಾಮ ವೇದಾವತಿ ನದಿಯಲ್ಲಿ ಹನಿ ನೀರೂ ಇಲ್ಲದೇ ಪ್ರಾಣಿ-ಪಕ್ಷಿಗಳು ಕುಡಿವ ನೀರಿಲ್ಲದೆ ತತ್ತರಿಸುತ್ತಿವೆ. ಜಾನುವಾರುಗಳಿಗೆ ನೀರು ಕುಡಿಸಲು ಹಳ್ಳ-ಕೊಳ್ಳ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರಕ್ಕೆ ಬಳ್ಳಾರಿ ಗ್ರಾಮೀಣ ಮತ್ತು ಸಿರಗುಪ್ಪ ಸೇರಿ 50ಕ್ಕೂ ಹೆಚ್ಚು ಗ್ರಾಮಗಳು ಸೇರುತ್ತಿವೆ. ಸದ್ಯ, ನೀರು ಬತ್ತಿದ ಪರಿಣಾಮ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಲ್ಲದೇ, ನದಿ ಪಾತ್ರದ ರೈತರು ನೂರರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ನೀರಿನ ಅಭಾವದಿಂದ ಒಣಗುತ್ತಿದ್ದು, ರೈತರು ಸಾಲದ ಸುಳಿಗೆ ಸಿಲುಕುವಂತೆಯಾಗಿದೆ. ಹತಾಶರಾದ ರೈತರು ಬತ್ತಿದ ನದಿಯ ಒಡಲಲ್ಲಿ 20 ರಿಂದ 30 ಅಡಿಗಳಷ್ಟು ಆಳದ ಹೊಂಡ ತೋಡಿದರೂ ನೀರು ಸಿಗುತ್ತಿಲ್ಲ. ಇದು ಅಂತರ್ಜಲ ಮಟ್ಟ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ.