ದಲಿತನ ನಾಯಕನ ಬೆಳವಣಿಗೆ ಬಿಜೆಪಿ ಸಹಿಸಲ್ಲ

 ಬಿ.ನಾಗೇಂದ್ರ
ಬಿ.ನಾಗೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಧರ್ಮ ಯಾರೊಬ್ಬರ ಸ್ವತ್ತಲ್ಲ

ಬಳ್ಳಾರಿ :

ಒಬ್ಬ ದಲಿತ ಹಾಗೂ ಹಿಂದುಳಿದ ನಾಯಕ ಬೆಳೆಯುವುದನ್ನು ಬಿಜೆಪಿ ನಾಯಕರು ಸಹಿಸಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.

ತಾಲೂಕಿನ ಚೆಳ್ಳಗುರ್ಕಿ ಗ್ರಾಮದಲ್ಲಿ ನೂತನವಾಗಿ ಸಚಿವರಾದ ಹಿನ್ನಲೆ ಎರ್ರಿತಾತ ದೇವಸ್ಥಾನದಲ್ಲಿ ಪೂಜೆ‌ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ಹಿರಿಯರು. ಅವರು ಆ ರೀತಿಯ ಹೇಳಿಕೆ ನೀಡಿರುವ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿಯಲ್ಲೇ ಭ್ರಷ್ಟಾಚಾರದ ಆರೋಪ ಎದುರಿಸದವರು ಎಷ್ಟು ಜನ ಇದ್ದಾರೆ?" ಎಂದು ಪ್ರಶ್ನಿಸಿದರು.

ಶಾಸಕ‌ ಜಿ.ಜನಾರ್ದನರೆಡ್ಡಿ ಅವರು ತಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಂಡು ಮಾತನಾಡಬೇಕು. ಏಕವಚನದಲ್ಲಿ ಮಾತನಾಡುವುದನ್ನು ಬಿಡಬೇಕು. ನಾನೂ ಆ ರೀತಿಯಲ್ಲಿ ಮಾತನಾಡಬಹುದು. ಆದರೆ,

ಅವರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಮೊದಲು ಮಾತನಾಡುವುದನ್ನು ಸರಿಯಾಗಿ ಕಲಿಯಬೇಕು ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ನಾವೂ ಮಾತನಾಡಬಹುದು. ಅವರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ತಂದೆ , ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು ಎಂದು ಟೀಕಿಸಿದರು.

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವೆಲ್ಲರೂ ಹಿಂದೂಗಳು. ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ ಮಾಡಿದಷ್ಟು ಪೂಜೆ, ಹೋಮ–ಹವನಗಳನ್ನು ಯಾರೂ ಮಾಡುವುದಿಲ್ಲ. ಹಿಂದೂ ಧರ್ಮ ಯಾರೊಬ್ಬರ ಸ್ವತ್ತಲ್ಲ. ಜಾತಿ ವ್ಯವಸ್ಥೆ ಹೋಗಬೇಕು ಎಂಬುದು ಸತ್ಯ" ಎಂದರು.
ಸದ್ಯ ತುಂಗಭದ್ರ ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವರಿಷ್ಠರು ನನ್ನ ಮೇಲೆ ಮತ್ತೊಮ್ಮೆ ಜವಾಬ್ದಾರಿ ವಹಿಸಿದ್ದಾರೆ. ನನ್ನ ಮುಂದೆ ಸಾಕಷ್ಟು ಸವಾಲುಗಳಿದ್ದು, ಜಿಲ್ಲೆಯ ಎಲ್ಲ ಶಾಸಕರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇತ್ತು. ಈಗ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net