ಲಾಂಛನ ತಯಾರಿಸಿದ ಕಲಾವಿದ ದೀಪಕ್

ಬಿ.ದೀಪಕ್
ಬಿ.ದೀಪಕ್
Published on

ಪ್ರಮುಖ ಮುಖ್ಯಾಂಶಗಳು

  • ಕುಮಾರರಾಮನ
  • ಕೋಟೆ
  • ಸಂಪೂರ್ಣವಾಗಿ
ಕಂಪ್ಲಿ: ಕಂಪ್ಲಿ- ಕುರುಗೋಡು ಹಾಗೂ ಹಂಪಿ ಉತ್ಸವಗಳ ಲಾಂಛನವನ್ನು ಹೊಸಪೇಟೆ ಬಾಣದಕೇರಿಯ ಕಲಾವಿದ ಬಿ.ದೀಪಕ್ ರಚಿಸಿದ್ದು ಜನಮೆಚ್ಚುಗೆ ಗಳಿಸಿದೆ.
ಬಾಣದ ರಾಮಪ್ಪ ಸುಜಾತಾ ಅವರ ಪುತ್ರ ದೀಪಕ್ ಧಾರವಾಡ ಭಾರತೀಯ ಕಲಾ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಪೇಂಟಿಂಗ್, ಕರ್ನಾಟಕ ವಿವಿಯಲ್ಲಿ ಎಂ.ಎಫ್.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾವಚಿತ್ರ, ಕ್ರಿಯೇಟಿವ್ ಲ್ಯಾಂಡ್‌ಸ್ಕೇಪ್, ಅಮೂರ್ತ ಕಲಾಪ್ರಕಾರಗಳಲ್ಲಿ ನಿಸರ್ಗ ಚಿತ್ರಗಳು, ಕಂಪ್ಯೂಟರ್ ಗ್ರಾಫಿಕ್ ಚಿತ್ರಗಳು, ನಾನಾ ಸಾಹಿತ್ಯ ಕೃತಿಗಳಿಗೆ, ಅಭಿನಂದನಾ ಗ್ರಂಥ, ಸ್ಮರಣಸಂಚಿಕೆಗಳಿಗೆ ಮುಖಪುಟ ರಚಿಸುವಲ್ಲಿ ಕ್ರಿಯಾಶೀಲರಾಗಿದ್ದಾರೆ. ರಾಜ್ಯ ಸರ್ಕಾರ ಆಯೋಜಿಸುವ ಬಳ್ಳಾರಿ ಉತ್ಸವ, ಆನೆಗುಂದಿ ಉತ್ಸವ, ಕಂಪ್ಲಿ ಉತ್ಸವಕ್ಕೆ ಲಾಂಛನ ರಚಿಸಿದ್ದು, ನಿರಂತರ ನಾಲ್ಕು ಬಾರಿ ಹಂಪಿ ಉತ್ಸವಕ್ಕೆ ಇವರ ಲಾಂಛನ ಆಯ್ಕೆಯಾಗಿದೆ.
ದೀಪಕ್ ಏಕವ್ಯಕ್ತಿ ಕಲಾಪ್ರದರ್ಶನವನ್ನು ಧಾರವಾಡ, ಹೊಸಪೇಟೆ, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ, ಸಿಂಧನೂರು, ಗದಗ, ಬೆಂಗಳೂರು, ಗೋವಾ ಸೇರಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ.
ಕಂಪ್ಲಿ ಲಾಂಛನದ ವಿಶೇಷತೆ: ಕಂಪ್ಲಿ ಉತ್ಸವದ ಲಾಂಛನದಲ್ಲಿ ಕುಮಾರರಾಮನ ಕೋಟೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ಕೋಟೆಯ ಮೇಲೆ ಕಂಪ್ಲಿಯ ಸೋಮನಾಥೇಶ್ವರ ಮೂರ್ತಿಯನ್ನು ಸೂರ್ಯರಶ್ಮಿಯಿಂದ ಅಲಂಕೃತಗೊಳಿಸಲಾಗಿದೆ. ಮುಂಭಾಗದಲ್ಲಿ ಸ್ಥಳೀಯ ವೀರಗಲ್ಲು, ನಾಡ ಸಂಸ್ಕೃತಿಯ ಪ್ರತೀಕವಾಗಿ ಭರತನಾಟ್ಯ ಕಲೆ, ಗಂಡುಗಲಿ ಕುಮಾರರಾಮನ ಮೈದೋರಿ ನಿಂತ ಚಿತ್ರ ರಚಿಸಲಾಗಿದೆ. ಬಾಳೆಗಳನ್ನು ಚಿತ್ರಿಸಿ ಸಾಮ್ರಾಜ್ಯದ ಸಮೃದ್ಧಿಯ ಸಂಕೇತವಾಗಿ ಬಳಸಲಾಗಿದೆ.
ಕುರುಗೋಡು ಉತ್ಸವದ ಲಾಂಛನದಲ್ಲಿ ದೊಡ್ಡಬಸವೇಶ್ವರ ಗೋಪುರವನ್ನು ಹೊನ್ನಕಳಸದಂತೆ ಅಳವಡಿಸಿ ವೃತ್ತಾಕಾರದಲ್ಲಿ ಎಡ ಭಾಗದಲ್ಲಿ ನೀಲಮ್ಮದೇವಿಯ ಮೂರ್ತಿ ಮಧ್ಯದಲ್ಲಿ ದೊಡ್ಡಬಸವೇಶ್ವರ ಗದ್ದುಗೆ ಮೂರ್ತಿ ಹಾಗೂ ಬಲಭಾಗದಲ್ಲಿ ಪಂಚಮುಖಿ ವೀರಭದ್ರೇಶ್ವರ ಮೂರ್ತಿ ಹಾಗೂ ಗೂಹಾಂತರ ದೇವಾಲಯ, ಚಿಕ್ಕಬಸವಣ್ಣ ದೇವಾಲಯ ಮತ್ತು ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯಗಳನ್ನು ಚಿತ್ರಿಸಲಾಗಿದೆ.
ಹಂಪಿ ಉತ್ಸವದ ಲಾಂಛನದಲ್ಲಿ ಉಗ್ರನರಸಿಂಹ, ಯಂತ್ರೋದ್ಧಾರಕ ಆಂಜನೇಯನ ಮಧ್ಯದಲ್ಲಿ ವಿಜಯನಗರ ಸಾಮ್ರಜ್ಯದ ರಾಜ ಲಾಂಛನ, ತುಲಾಭಾರ ಮಾಡುವ ಸ್ಮಾರಕದ ಮೇಲೆ ಅಳವಡಿಸಲಾಗಿದೆ. ಇದರ ಮಧ್ಯೆ ಹಂಪೆಯ ಬೆಟ್ಟ-ಗುಡ್ಡಗಳ ನಡುವೆ ನೈಸರ್ಗಿಕವಾಗಿ ಹರಿಯುವ ತುಂಗಭದ್ರೆಯ ದಡದಲ್ಲಿ ಶ್ರೀ ವಿರೂಪಾಕ್ಷ ದೇವಾಲಯದ ಗೋಪುರ, ಕಲ್ಲಿನ ರಥವು, ದೇಸಿ ಕಲೆಗಳಾದ ಡೊಳ್ಳು ಕುಣಿತ, ವೀರಗಾಸೆ ಚಿತ್ರಿಸಿದ್ದು, ನಾಡಿನ ಜಾನಪದ ಸಂಸ್ಕೃತಿಯ ಸೊಗಡನ್ನು ಬಿಂಬಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net