ಕುಡಿತಿನಿ ಭೂಸಂತ್ರಸ್ತ ರೈತರ ಉದ್ವಿಗ್ನತೆ

ಕುಡಿತಿನಿಯಲ್ಲಿ ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಂಡ ಪ್ರದೇಶಕ್ಕೆ ರೈತರು ಎತ್ತಿನಬಂಡಿ ಮೂಲಕ ಪ್ರವೇಶಿಸಲು ಯತ್ನಿಸಿದ ವೇಳೆ ಪೊಲೀಸರು ತಡೆದರು.
ಕುಡಿತಿನಿಯಲ್ಲಿ ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಂಡ ಪ್ರದೇಶಕ್ಕೆ ರೈತರು ಎತ್ತಿನಬಂಡಿ ಮೂಲಕ ಪ್ರವೇಶಿಸಲು ಯತ್ನಿಸಿದ ವೇಳೆ ಪೊಲೀಸರು ತಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ವಶಕ್ಕೆ ಪಡೆದ ಪೊಲೀಸರು
  • ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ
ಬಳ್ಳಾರಿ : ತಾಲೂಕಿನ ಕುಡಿತಿನಿ ಸುತ್ತಲಿನ ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನ್ಯಾಯಯುತ ಪರಿಹಾರ ನೀಡದೆ ಜಿಂದಾಲ್‌ಗೆ ಭೂಮಿ ಹಸ್ತಾಂತರಿಸುವುದು ವಿರೋಧಿಸಿ, ಭೂ ಸಂತ್ರಸ್ತ ರೈತರು ಜಮೀನಿಗೆ ಪ್ರವೇಶಿಸಲು ಮುಂದಾದ ವೇಳೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಮಿತ್ತಲ್ ಕಂಪನಿಗೆ ನೀಡಿದ್ದ ಜಮೀನಿನತ್ತ ಎತ್ತಿನ ಬಂಡಿಗಳ ಮೂಲಕ ತೆರಳಿ ಪ್ರವೇಶಿಸುವುದಾಗಿ ಘೋಷಿಸಿದ್ದ ರೈತರು ಬೆಳಗ್ಗಿನಿಂದಲೇ ಕುಡುತಿನಿ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಸೇರತೊಡಗಿದರು. ಬಳಿಕ ಬೈಪಾಸ್ ರಸ್ತೆಯ ಮೂಲಕ ಜಮೀನಿನತ್ತ ಹೊರಟಾಗ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಹೋರಾಟ ಸಮಿತಿಯ ಮುಖಂಡರು ಸೇರಿದಂತೆ ನೂರಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು ತೋರಣಗಲ್ ಶಾಲಾ ಮೈದಾನಕ್ಕೆ ಕರೆದೊಯ್ದರು. ಕೆಲ ರೈತರು ಮಾತ್ರ ಸ್ಥಳದಲ್ಲೇ ಧರಣಿ ನಡೆಸಿ ಸರ್ಕಾರ ಹಾಗೂ ಕೆಐಎಡಿಬಿ ವಿರುದ್ಧ ಘೋಷಣೆ ಕೂಗಿದರು.
ದಶಕದ ಹಿಂದೆ ಉಕ್ಕು ಕಾರ್ಖಾನೆ ಸ್ಥಾಪನೆ ಉದ್ದೇಶದಿಂದ ಕುಡಿತಿನಿ, ತೋರಣಗಲ್ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಮಿತ್ತಲ್ ಕಂಪನಿಗಾಗಿ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ನಂತರ ಮಿತ್ತಲ್ ಕಂಪನಿ ಯೋಜನೆ ಮುಂದುವರಿಸಲು ಹಿಂದೇಟು ಹಾಕಿತ್ತು. ಈಗ ಆ ಜಮೀನನ್ನು ಜಿಂದಾಲ್ ಸಂಸ್ಥೆಗೆ ಹೆಚ್ಚಿನ ದರದಲ್ಲಿ ಹಸ್ತಾಂತರಿಸಲು ಕೆಐಎಡಿಬಿ ಮುಂದಾಗಿದೆ ಎಂಬುದಾಗಿ ರೈತರು ಆರೋಪಿಸಿರು.
ಮಿತ್ತಲ್ ಕಂಪನಿ ಕೈಗಾರಿಕೆ ಸ್ಥಾಪಿಸದಿದ್ದರೆ ನಮ್ಮ ಜಮೀನು ಹಿಂದಕ್ಕೆ ನೀಡಬೇಕು. ಅದು ಸಾಧ್ಯವಿಲ್ಲದಿದ್ದರೆ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರೈತರಿಂದ ಕಡಿಮೆ ದರಕ್ಕೆ ಜಮೀನು ಪಡೆದು, ಬಳಿಕ ದೊಡ್ಡ ಕಂಪನಿಗಳಿಗೆ ಲಾಭದಾಯಕ ದರದಲ್ಲಿ ನೀಡುವುದು ಅನ್ಯಾಯ. ಸರ್ಕಾರ ಮತ್ತು ಕೆಐಎಡಿಬಿ ರೈತರ ಭಾವನೆಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಹೋರಾಟ ಸಮಿತಿಯ ಮುಖಂಡರು ಕಿಡಿಕಾರಿದರು.
ಹೋರಾಟ ಸಮಿತಿಯ ಪ್ರಮುಖರಾದ ಯು. ಬಸವರಾಜ್, ಜೆ. ಸತ್ಯಬಾಬು, ಜಂಗ್ಲಿ ಸಾಬ್, ತಿಪ್ಪೆಸ್ವಾಮಿ ಸೇರಿದಂತೆ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಪ್ರತಿಭಟನೆ ಹಿನ್ನೆಲೆ ಕುಡಿತಿನಿ, ತೋರಣಗಲ್ ಭಾಗದಲ್ಲಿ ಬೆಳಗ್ಗಿನಿಂದಲೇ ಪೊಲೀಸ್ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬೈಪಾಸ್ ರಸ್ತೆ ಸೇರಿದಂತೆ ಜಮೀನಿನತ್ತ ಹೋಗುವ ಪ್ರಮುಖ ಮಾರ್ಗಗಳಲ್ಲಿ ಸಾರ್ವಜಿನಕರಿಗೆ ನಿಷೇಧಿಸಲಾಗಿತ್ತು. ರೈತರು ಜಮೀನಿನೊಳಗೆ ಪ್ರವೇಶಿಸದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net