ಕನ್ನಡ ಓದಲು-ಬರೆಯಲು ಬಾರದ ಶಿಕ್ಷಕರು

ಸೂಕ್ತ ತರಬೇತಿ ನೀಡಲು ಶಿಕ್ಷಣ ಇಲಾಖೆಗೆ ಶಾಸಕಿ ನಿರ್ದೇಶನ ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ ವಿತರಣೆ ಸೂಚನೆ
ಹರಪನಹಳ್ಳಿ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಎಸಿ ಟಿ. ಸುರೇಶ್ ಕುಮಾರ್, ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು, ಇಒ ವೈ.ಎಚ್. ಚಂದ್ರಶೇಖರ ಇದ್ದರು.
ಹರಪನಹಳ್ಳಿ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಎಸಿ ಟಿ. ಸುರೇಶ್ ಕುಮಾರ್, ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು, ಇಒ ವೈ.ಎಚ್. ಚಂದ್ರಶೇಖರ ಇದ್ದರು.GAYATRI MALIPATIL
Published on: 

ಹರಪನಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಿಯಾಗಿ ಕನ್ನಡ ಓದಲು, ಬರೆಯಲು ಬರುವುದಿಲ್ಲ. ಆದ್ದರಿಂದ ಅವರಿಗೆ ಶಿಕ್ಷಣ ಇಲಾಖೆಯಿಂದ ತರಬೇತಿ ನೀಡಬೇಕು. ಭಾಷಾಜ್ಞಾನ ಹಿಡಿತವಿದ್ದರೆ ಮಾತ್ರ ಮಕ್ಕಳ ಶಿಕ್ಷಣ ಉತ್ತಮಗೊಳಿಸಲು ಸಾಧ್ಯ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಶಾಲಾ ಮಕ್ಕಳಿಗೆ ನೀಡಿರುವ ಕಳಪೆ ಶೂಗಳನ್ನು ವಾಪಸ್ ಪಡೆದು ಗುಣಮಟ್ಟದ ಶೂ ವಿತರಿಸಬೇಕು. ಮಧ್ಯಾಹ್ನದ ಬಿಸಿಯೂಟ ತಯಾರಿಸುವಾಗ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು. ನಿಯಮಾನುಸಾರ ತರಕಾರಿ ಮತ್ತು ದಿನಸಿ ವಸ್ತುಗಳನ್ನು ಹಾಕಿಯೇ ಅಡುಗೆ ತಯಾರಿಸಿ ನಿರ್ದೇಶನ ನೀಡುವಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜಗೆ ಕಟ್ಟುನಿಟ್ಟಿನ ಆದೇಶಿಸಿದರು.

ಕೃಷಿ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಇಲಾಖೆ ಅಧಿಕಾರಿಗಳು ಪೂರಕ ಮಾಹಿತಿ ಒದಗಿಸಬೇಕು. ಖೇತ್ ಬಚಾವೋ ಯೋಜನೆ ದಾಖಲೆಗೆ ಮಾತ್ರ ಸೀಮಿತವಾಗಿದೆ. ರೈತರು ಜಮೀನುಗಳನ್ನು ವಿಂಡ್ ಪವರ್ ಕಂಪನಿಗಳಿಗೆ ನೀಡುತ್ತಿರುವುದು ಆತಂತಕಾರಿ ಬೆಳವಣಿಗೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಭೂಮಿಯನ್ನು ಲೀಜ್ ರೂಪದಲ್ಲಿ ಕಂಪನಿಗಳಿಗೆ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭೀಕರ ಬರಗಾಲದಿಂದ ಡಿಸೆಂಬರ್ ಆರಂಭದ ವೇಳೆ ಜನ-ಜಾನುವಾರುಗಳಿಗೆ ನೀರಿನ ಅಭಾವ ಹೆಚ್ಚಾಗಲಿದ್ದು, ಸಮರ್ಪಕ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಬೋರ್‌ವೆಲ್‌ನಲ್ಲಿ ಲಭ್ಯವಿಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಪ್ರತಿ ಗ್ರಾಪಂಗೆ 36 ಸಾವಿರ ರೂ. ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಇನ್ನೂ ಹಣ ಬಂದಿಲ್ಲ. ಕೂಡಲೇ ಮೇಲಧಿಕಾರಿಗಳಿಗೆ ಸೂಚಿಸಿ ಹಣ ಜಮಾ ಮಾಡುವಂತೆ ನೀರಾವರಿ ಇಲಾಖೆ ಎಇಇ ಮಂಜ್ಯಾನಾಯ್ಕಗೆ ತಿಳಿಸಿದರು.

ತಾಲೂಕಿನ ನಿಟ್ಟೂರು ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯರು ಹಾಗೂ ಕಂಪ್ಯೂಟರ್ ಆಪರೆಟರ್‌ನಿಂದ 1.30 ಕೋಟಿ ರೂ. ಅವ್ಯವಹಾರವಾಗಿದ್ದು, ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ ಅಂದಾಜು 3 ಸಾವಿರಕ್ಕೂ ಅಧಿಕ ದೇವದಾಸಿಯರಿದ್ದು, ಸರಿಯಾಗಿ ಸಮೀಕ್ಷೆ ಕೈಗೊಳ್ಳುವಂತೆ ಸಿಡಿಪಿಒ ರಾಮನಗೌಡಗೆ ತಿಳಿಸಿದರು. ಆಹಾರ ಇಲಾಖೆಯಿಂದ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಊಟಕ್ಕೆ ಬಳಸದೆ ಕಾಳಸಂತೆಯಲ್ಲಿ ಮಾರಲಾಗುತ್ತಿದೆ. ಇದರ ಬದಲು ಜೋಳ ನೀಡಲು ಕ್ರಮವಹಿಸುವಂತೆ ಸೂಚಿಸಿದರು.

ಪಿಡಬ್ಲುೃಡಿ ಇಲಾಖೆಯ ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಜಿಪಂ ಹಾಗೂ ತಾಪಂ ಚುನಾವಣೆ ಮುನ್ನ ಡಿಸೆಂಬರ್ ಅಂತ್ಯದ ಒಳಗೆ ವಿವಿಧ ಕಾಮಗಾರಿಗಳ ಭೂಮಿಪೂಜೆ ಪೂರ್ಣಗೊಳಿಸಿ ಎಂದು ಎಇಇ ರಾಘವೇಂದ್ರಗೆ ಶಾಸಕಿ ಸೂಚಿಸಿದರು.

ತಾಲೂಕು ಆಡಳಿತ ಕಚೇರಿಗಳಲ್ಲಿ ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ದಾಖಲೆಗಳನ್ನು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ನಿರ್ದೇಶಿಸಲು ಎಸಿ ಹಾಗೂ ತಹಸೀಲ್ದಾರ್‌ಗೆ ತಿಳಿಸಿದರು.