ತೆಕ್ಕಲಕೋಟೆಯ ವರವಿನ ಮಲ್ಲೇಶ್ವರ ದೇವಸ್ಥಾನದಲ್ಲಿ ದರ್ಶನ ಮುಗಿಸಿಕೊಂಡು ಸುಮಾರು ಹದಿನೈದು ಮಂದಿ ಪ್ರಯಾಣಿಕರು ಟಾಟಾ ಏಸ್ ವಾಹನದಲ್ಲಿ ಬಳ್ಳಾರಿಗೆ ಮರಳುತ್ತಿದ್ದರು. ಈ ವೇಳೆ ಬಿಸಿಲಿನ ತಾಪಕ್ಕೆ ವಾಹನದ ಇಂಜಿನ್ ಏಕಾಏಕಿ ಕಾಯ್ದು ಬೆಂಕಿ ಕಾಣಿಸಿಕೊಂಡಿದೆ. ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದು ವಾಹನ ನಿಲ್ಲಿಸಿದ್ದಾನೆ. ತಕ್ಷಣವೇ ಎಲ್ಲ ಹದಿನೈದು ಪ್ರಯಾಣಿಕರು ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಸ್ಥಳೀಯರು ಮತ್ತು ಪ್ರಯಾಣಿಕರು ನೀರು ಹಾಕಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಸಹ, ಅಗ್ನಿಯ ಕೆನ್ನಾಲಿಗೆಗೆ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಾಹನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.