ನಗರದಲ್ಲಿರುವ ಆರು ಆಟೋ ಗ್ಯಾಸ್ ಏಜೆನ್ಸಿಗಳ ಪೈಕಿ ನಾಲ್ಕು ಈಗಾಗಲೇ ಸ್ಥಗಿತಗೊಂಡಿವೆ. ಈ ಪರಿಸ್ಥಿತಿಯ ಲಾಭ ಪಡೆಯಲು ಗ್ಯಾಸ್ ಪ್ಲಸ್ ಏಜೆನ್ಸಿ ದರ ಏರಿಕೆ ಮಾಡಿದೆ ಎಂಬುದಾಗಿ ಆಟೋ ಚಾಲಕರು ಆರೋಪಿಸಿದ್ದಾರೆ. ದಿನವಿಡೀ ಕಷ್ಟಪಟ್ಟು ದುಡಿಯುವ ನಮಗೆ ದಿಢೀರ್ 10 ರೂ. ಏರಿಕೆ ಮಾಡಿದರೆ ಬದುಕುವುದು ಹೇಗೆ? ಕೂಡಲೇ ದರ ಕಡಿಮೆ ಮಾಡಿ, ಇಲ್ಲವೇ ಬಂಕ್ ಬಂದ್ ಮಾಡಿ ಎಂಬುದಾಗಿ ಚಾಲಕರು ಘೋಷಣೆ ಕೂಗಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಪೊಲೀಸರ ಬಿಗಿ ಪಟ್ಟು ಮತ್ತು ಚಾಲಕರ ಆಕ್ರೋಶಕ್ಕೆ ಮಣಿದ ಏಜೆನ್ಸಿ ಮಾಲೀಕರು, ಪ್ರಸ್ತುತ ಲಭ್ಯವಿರುವ ಹಳೆಯ ಸ್ಟಾಕ್ ಮುಗಿಯುವವರೆಗೆ ಲೀಟರ್‌ಗೆ 84.85 ರೂಪಾಯಿ ದರದಲ್ಲೇ ಗ್ಯಾಸ್ ನೀಡಲು ಒಪ್ಪಿಕೊಂಡಿದ್ದಾರೆ. ಆದರೆ, ನಾಳೆಯಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಮಾಲೀಕರು ತಿಳಿಸಿದ್ದಾರೆ.