ಬಳ್ಳಾರಿಯ ಹಲಕುಂದಿ ಗ್ರಾಮದಲ್ಲಿ ಮಳೆ ಕೊರತೆಯಿಂದ ತೊಗರಿ ಬೆಳೆ ಹಾಳಾದ ಬಗ್ಗೆ ಸಚಿವ ಬಿ.ನಾಗೇಂದ್ರ ಮಾಹಿತಿ ಪಡೆದರು. ಡಿಸಿ ಕೆ.ನಾಗೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಸೋಮಸುಂದರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡ ಎಚ್.ತಿಮ್ಮನಗೌಡ ಇದ್ದರು.
ಜಿಲ್ಲೆಯಲ್ಲಿ ರೈತರು ಬಿತ್ತನೆ ಕಾರ್ಯ ಮಾಡಿದ್ದರೂ, ಕಳೆದ ಎರಡು ತಿಂಗಳಿಂದ ಹನಿ ಮಳೆಯೂ ಬಾರದೆ ಬೆಳೆಗಳು ಜಮೀನಿನಲ್ಲೇ ಒಣಗಿ ನಶಿಸುತ್ತಿವೆ. ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ವರದಿ ಸಿದ್ಧಪಡಿಸಬೇಕು ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.
ರಾಜ್ಯದಲ್ಲಿ ಬರಪರಿಸ್ಥಿತಿ ಹಿನ್ನಲೆ ತಾಲೂಕಿನ ಹಲಕುಂದಿ, ಮಿಂಚೇರಿ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲಿಸಿ ಮಾತನಾಡಿದರು. ತೊಗರಿ, ಹತ್ತಿ, ಮೆಕ್ಕೆಜೋಳ ಹಾಗೂ ಸಜ್ಜೆ ಸೇರಿದಂತೆ ಪ್ರಮುಖ ಬೆಳೆಗಳು ನೀರಿನ ಅಭಾವದಿಂದ ಬಾಡಿಹೋಗುತ್ತಿದ್ದು, ರೈತರಿಗೆ ಭಾರಿ ನಷ್ಟ ಉಂಟಾಗುವ ಭೀತಿ ಎದುರಾಗಿದೆ. ಅಧಿಕಾರಿಗಳು ನೀಡುವ ಸಮೀಕ್ಷಾ ವರದಿಯ ಆಧಾರದ ಮೇಲೆ ಬರಪೀಡಿತ ಪ್ರದೇಶಗಳ ಘೋಷಣೆ ಹಾಗೂ ರೈತರಿಗೆ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬರ ಘೋಷಣೆ ಮಾಡಲು ಮಳೆಯ ಪ್ರಮಾಣದ ಕುರಿತು ಕೆಲವು ನಿರ್ದಿಷ್ಟ ಮಾನದಂಡಗಳಿವೆ. ಮುಂದಿನ 10 ದಿನಗಳ ಪರಿಸ್ಥಿತಿಯನ್ನು ವೀಕ್ಷಿಸಿ, ಮಾನದಂಡಗಳಿಗೆ ಒಳಪಟ್ಟರೆ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಲು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಸದ್ಯ 65 ರಿಂದ 70 ಟಿಎಂಸಿ ನೀರು ತಲುಪುವ ನಿರೀಕ್ಷೆಯಿದೆ. ಜಲಾಶಯದಲ್ಲಿ ಕನಿಷ್ಠ 80 ಟಿಎಂಸಿ ನೀರು ಶೇಖರಣೆಯಾದ ನಂತರವೇ ಸಲಹಾ ಸಮಿತಿಯ ಸಭೆ ನಡೆಸಿ, ಕುಡಿವ ನೀರು ಹಾಗೂ ಕೃಷಿ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ 10 ದಿನಗಳಲ್ಲಿ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಜಲಾಶಯ ಭರ್ತಿಯಾಗುವ ಭರವಸೆಯಿದೆ ಎಂದು ತಿಳಿಸಿದರು.
ಬಾಕ್ಸ್ : ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಬರ ವೀಕ್ಷಣೆಗೆ ಸಚಿವ ಬಿ.ನಾಗೇಂದ್ರ ಅವರು ತೊಗರಿ ಬೆಳೆ ಬಗ್ಗೆ ಪರಿಶೀಲಿಸುವ ವೇಳೆ ಕೆಲ ಕಾಲ ಮಳೆ ಸುರಿಯಿತು. ಮಳೆಯಲ್ಲಿಯೂ ಬೆಳೆ ವೀಕ್ಷಣೆ ಮಾಡಿ ಜಿಲ್ಲಾಡಳಿತ ಅಧಿಕಾರಿಗಳಿಂದ ಮಾಹಿತಿ ಪಡೆದರು.