ಬಳ್ಳಾರಿಯ ನೂತನ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ಬಿಜೆಪಿ ಘಟಕ ಹಾಗೂ ಹಿಂದೂಪರ ಸಂಘಟನೆಗಳು ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಆಗ್ರಹಿಸಿ ಪ್ರತಿಭಟಿಸಿದರು. ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಮೋಕಾ, ಕೊಟ್ಟೂರಿನ ಶಾಖಮಠದ ಸಿದ್ದಲಿಂಗ ಬಸವ ಸ್ವಾಮೀಜಿ, ಮುಖಂಡರಾದ ಎಚ್.ಹನುಮಂತಪ್ಪ, ಗಣಪಾಲ್ ಐನಾಥರೆಡ್ಡಿ, ಕೆ.ಎಸ್.ದಿವಾಕರ್ ಇತರರಿದ್ದರು.
ಬಳ್ಳಾರಿ : ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಇಲ್ಲಿನ ಸಂಗಮ್ ವೃತ್ತದಿಂದ ಡಿಸಿ ಕಚೇರಿಯವರೆಗೆ ಜಿಲ್ಲಾ ಬಿಜೆಪಿ ಘಟಕ ಹಾಗೂ ಹಿಂದೂಪರ ಸಂಘಟನೆಗಳು ಪಾದಯಾತ್ರೆ ನಡೆಸಿ, ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಹಿಂದೂ ಧರ್ಮದಲ್ಲಿ ಹಸುಗಳನ್ನು ದೇವರ ಸ್ವರೂಪವಾಗಿ ಕಾಣಲಾಗುತ್ತಿದೆ. ಆದರೆ, ವಿವಿಧೆಡೆ ಗೋಹತ್ಯೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗೋಮಾತೆಯ ರಕ್ಷಣೆಗೆ ವಿಶೇಷ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜತೆಯಲ್ಲಿ ಅಕ್ರಮ ಗೋವು ಸಾಗಣೆ ಹಾಗೂ ವಧೆ ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಗೋವು ಸಂರಕ್ಷಣೆ ಕೇವಲ ಧಾರ್ಮಿಕ ಭಾವನೆಗೆ ಸೀಮಿತವಲ್ಲ, ಅದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಯ ವಿಷಯವಾಗಿದೆ. ಗೋ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ, ಅನುದಾನ ಒದಗಿಸಬೇಕು. ಗೋ ರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸಿ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸಿಎಂ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.