ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಗಣಿಕಂಪನಿಗಳು ನಿಯಮಬಾಹಿರ ಅದಿರು ಸಾಗಣೆ ನಿರ್ಬಂಧಗೊಳಿಸಿ ಎಂಬುದಾಗಿ ಆಗ್ರಹಿಸಿ ಎಡಿಸಿ ಮಹಮ್ಮದ್ ಎನ್.ಜುಬೇರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಿತಿಯ ಮುಖಂಡರಾದ ಆರ್.ಮಾಧವರೆಡ್ಡಿ, ಶ್ರೀಶೈಲ ಆಲದಹಳ್ಳಿ, ಮಲ್ಲಿಕಾರ್ಜುನರೆಡ್ಡಿ, ಟಿ.ಎಂ.ಶಿವಕುಮಾರ್, ಎಂ.ಎಲ್.ಕೆ.ನಾಯ್ಡು, ಶಂಕರಮೂರ್ತಿ, ಶೈಲೇಂದ್ರ ಪಾಟೀಲ್ ಇತರರಿದ್ದರು.
ಬಳ್ಳಾರಿ : ಸಂಡೂರು ತಾಲೂಕಿನಲ್ಲಿ ಎನ್‌ಎಂಡಿಸಿ ಸೇರಿದಂತೆ ನಾನಾ ಗಣಿ ಕಂಪನಿಗಳು ನಡೆಸುತ್ತಿರುವ ಗಣಿಗಾರಿಕೆ ಹಾಗೂ ನಿಯಮಬಾಹಿರ ಅದಿರು ಸಾಗಣೆಯಿಂದ ಸ್ಥಳೀಯರ ಬದುಕು ದುಸ್ತರಗೊಂಡಿದೆ ಎಂಬುದಾಗಿ ಆರೋಪಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಗಣಿ ಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಜನ ಸಂಗ್ರಾಮ್ ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಆಲದಹಳ್ಳಿ ಮಾತನಾಡಿ, ಗ್ರಾಮಗಳ ಒಳ ರಸ್ತೆಗಳ ಮೂಲಕ ಭಾರೀ ವಾಹನಗಳಲ್ಲಿ ಅದಿರು ಸಾಗಿಸುತ್ತಿರುವುದರಿಂದ ರಸ್ತೆ ಹಾಳಾಗಿದ್ದು, ಧೂಳು ಮತ್ತು ಶಬ್ದ ಮಾಲಿನ್ಯ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ಗ್ರಾಮಸ್ಥರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಗಣಿ ಕಂಪನಿಗಳು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗ್ರಾಮ ರಸ್ತೆಗಳ ಮೂಲಕ ಅದಿರು ಸಾಗಣೆಯನ್ನು ತಕ್ಷಣ ನಿಲ್ಲಿಸಿ, ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿಪಡಿಸುವುದರ ಜತೆಗೆ ಗಣಿ ಬಾಧಿತ ಪ್ರದೇಶಗಳ ಜನರ ಬದುಕು ಮತ್ತು ಪರಿಸರ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಎಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.