ಸ್ಟೀಲ್ ಸಿಟಿ ರನ್ ಆ.2ರಂದು

ತಿಪ್ಪಾರೆಡ್ಡಿ
ತಿಪ್ಪಾರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯದ ಬಗ್ಗೆ ಜಾಗೃತಿ
  • ಸಾರ್ವಜನಿಕರಲ್ಲಿ ಫಿಟ್ನೆಸ್ ಅರಿವು ಮೂಡಿಸುವ ಪ್ರಯತ್ನ
ಬಳ್ಳಾರಿ : ಜಿಲ್ಲೆಯ ಯುವಜನತೆ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಳ್ಳಾರಿ ಸೈಕ್ಲಿಸ್ಟ್ಸ್ ಮತ್ತು ರನ್ಸರ್ಸ್ ಫೌಂಡೇಷನ್ ವತಿಯಿಂದ ಆ.2ರಂದು ಐದನೇ ಆವೃತ್ತಿಯ ಸ್ಟೀಲ್ ಸಿಟಿ ರನ್ ಆಯೋಜಿಸಲಾಗಿದೆ ಎಂದು ಪೌಂಡೇಷನ್ ಅಧ್ಯಕ್ಷ ಡಾ.ಎಂ.ತಿಪ್ಪಾರೆಡ್ಡಿ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಓಟ ಸ್ಪರ್ಧೆಗೆ ಈ ಬಾರಿ ಇನ್ನಷ್ಟು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಓಡುವ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಫಿಟ್ನೆಸ್ ಅರಿವು ಮೂಡಿಸುವ ಪ್ರಯತ್ನವಾಗಿ ಸ್ಟೀಲ್ ಸಿಟಿ ರನ್ ಆಯೋಜಿಸಲಾಗುತ್ತಿದೆ. ಪ್ರತೀ ವರ್ಷ ಸ್ಪರ್ಧಿಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಈ ಬಾರಿ 3 ಕಿ.ಮೀ. ಮಜ್ಜಾ ರನ್ ಜತೆಗೆ 5, 10 ಹಾಗೂ ಹೊಸದಾಗಿ 16 ಕಿ.ಮೀ. ವಿಭಾಗವನ್ನು ಪರಿಚಯಿಸಲಾಗಿದೆ. ವಿಶೇಷವಾಗಿ ಗಂಭೀರ ಓಟಗಾರರು ಹಾಗೂ ತರಬೇತಿ ಪಡೆದ ಸ್ಪರ್ಧಿಗಳನ್ನು ಗಮನದಲ್ಲಿಟ್ಟುಕೊಂಡು 16 ಕಿ.ಮೀ ವಿಭಾಗ ಸೇರಿಸಲಾಗಿದೆ ಎಂದರು. ಫೌಂಡೇಶನ್ ವತಿಯಿಂದ 2022ರಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಓಟದಲ್ಲಿ 1,100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಎರಡನೇ ಆವೃತ್ತಿಯಲ್ಲಿ 2,500ಕ್ಕೂ ಹೆಚ್ಚು ಮಂದಿ ಹಾಗೂ ಮೂರನೇ ಮತ್ತು ನಾಲ್ಕನೇ ಆವೃತ್ತಿಗಳಲ್ಲಿ ಸುಮಾರು 4,200 ಮಂದಿ ಪಾಲ್ಗೊಂಡಿದ್ದರು. ಈ ಬಾರಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
18 ವರ್ಷ ಮೇಲ್ಪಟ್ಟವರಿಗೆ 16 ಕಿ.ಮೀ. ಓಟಕ್ಕೆ 800 ರೂ., 15 ವರ್ಷ ಮೇಲ್ಪಟ್ಟವರಿಗೆ 10 ಕಿ.ಮೀ. ಓಟಕ್ಕೆ 600 ರೂ., 12 ವರ್ಷ ಮೇಲ್ಪಟ್ಟವರಿಗೆ 5 ಕಿ.ಮೀ. ಓಟಕ್ಕೆ 500 ರೂ. ಹಾಗೂ 3 ಕಿ.ಮೀ ಮಜ್ಜಾ ರನ್‌ಗೆ 450 ರೂ. ಸ್ಪರ್ಧೆಗಳ ನೊಂದಣಿ ಶುಲ್ಕ ನಿಗದಿಪಡಿಸಲಾಗಿದೆ. 16, 10 ಮತ್ತು 5 ಕಿ.ಮೀ ವಿಭಾಗಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳನ್ನು ಒಳಗೊಂಡಂತೆ ಏಳು ಲಕ್ಷ ರೂ. ಅಧಿಕ ಬಹುಮಾನಗಳು ವಿತರಿಸಲಾಗುವುದು ಎಂದು ವಿವರಿಸಿದರು.
ಭಾಗವಹಿಸುವ ಎಲ್ಲರಿಗೂ ಈವೆಂಟ್ ಟಿ-ಶರ್ಟ್, ಬಿಐಬಿ ಸಂಖ್ಯೆ, ಬ್ಯಾಗ್, ಉಪಹಾರ, ಕುಡಿವ ನೀರು ಹಾಗೂ ಕಾರ್ಯಕ್ರಮದ ಛಾಯಾಚಿತ್ರಗಳನ್ನು ನೀಡಲಾಗುವುದು. 16, 10 ಹಾಗೂ 5 ಕಿ.ಮೀ ವಿಭಾಗದ ಸ್ಪರ್ಧಿಗಳಿಗೆ ಚಿಪ್ ಟೈಮಿಂಗ್ ಸೌಲಭ್ಯ, ಫಿನಿಷರ್ ಪದಕ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಆದರೆ 3 ಕಿ.ಮೀ ಮಜ್ಜಾ ರನ್‌ಗೆ ಈ ಸೌಲಭ್ಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪೌಂಡೇಷನ್ ಪದಾಧಿಕಾರಿಗಳಾದ ನರೇಂದ್ರ ಗಾಂಧಿ, ವಿಕಾಸ್ ಜೈನ್, ಪ್ರಶಾಂತ್ ಸರ್ದಾ, ವಿನೋದ್ ಜೈನ್, ಡಾ.ಬಿ.ಕೆ.ಸುಂದರ್, ಡಾ.ರವಿ ಶಂಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net