ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರನಾಯ್ಕ ಸೂಚನೆ
ಯೋಜನೆಗಳ ಫಲಾನುಭಾವಿಗಳೊಂದಿಗೆ ಚರ್ಚೆ
ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿವೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ಸೊನ್ನ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭಾವಿಗಳೊಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಐತಿಹಾಸಿಕ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿಸಿ ಮಾದರಿಯಾಗಿದೆ. 58 ಸಾವಿರ ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳು ರಾಜ್ಯದೆಲ್ಲೆಡೆ ಅನುಷ್ಠಾನಗೊಂಡಿವೆ. ಕಳೆದ 3 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಿರುವ ಮಾಹಿತಿ ಬಂದಿದ್ದು, ಮೊದಲೇ ಮಾತು ಕೊಟ್ಟಂತೆ 15ಸಾವಿರ ಎಕರೆ ಕೃಷಿಭೂಮಿಗೆ ನೀರಾವರಿ ಕಲ್ಪಿಸುವ ಪ್ರಯತ್ನದಲ್ಲಿದ್ದೇನೆ ಎಂದರು.
ಸೊನ್ನ-ಹ.ಬೊ.ಹಳ್ಳಿ ರಸ್ತೆಯ ಅಭಿವೃದ್ಧಿ, ಬಸ್ ಸೌಲಭ್ಯ, ಅರ್ಧ ಕಿ.ಮೀ ನಡೆದು ಹೋಗಿ ಬಸ್ ತಂಗುದಾಣ ತಲುಪಬೇಕು ಎಂದು ಗ್ರಾಮಸ್ಥರು ತಿಳಿಸಿದಾಗ ಕೂಡಲೇ ಬಸ್ ಡಿಪೋ ಮ್ಯಾನೇಜರ್ ಜಿ.ಬಿ.ಜಡೇಶಗೆ ನಾಳೆಯಿಂದಲೇ ಬಸ್ ಸಂಚಾರ ಆರಂಭಿಸಬೇಕು ಎಂದು ಸೂಚಿಸಿದರು.
ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಿ.ವಿ.ಶಿವಯೋಗಿ, ಇಟ್ಟಿಗಿ ಬ್ಲಾಕ್ ಅಧ್ಯಕ್ಷ ಕಾಲ್ವಿ ಹನುಮಂತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಹಾಲೇಶ, ಒಬಿಸಿ ಜಿಲ್ಲಾಧ್ಯಕ್ಷ ಟಿ.ಮಹೇಶ, ಜಿಪಂ ಮಾಜಿ ಸದಸ್ಯರಾದ ವಸಂತ, ವಿಜಯಕುಮಾರ, ಪ್ರಮುಖರಾದ ವಕೀಲ ಚಂದ್ರನಾಯ್ಕ, ಸಂತೋಷ, ಜಿ.ಎಂ.ಗುರುವಯ್ಯ, ಮಲ್ಲಿಕಾರ್ಜುನಗೌಡ, ಟಿ.ದೊಡ್ಡನಿಂಗಪ್ಪ, ಟಿ.ಮಲ್ಲಣ್ಣ ಇತರರಿದ್ದರು.