ಕಂಪ್ಲಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಸಾಧಕರಾದ ಡಾ.ಎ.ಸಿ.ದಾನಪ್ಪ, ಅಂಬಿಗರ ಮಂಜುನಾಥ, ಸೋಮನಾಥ ಭೂಪಾಳರನ್ನು ಗೌರವಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖ ಚಿತ್ರಗಾರ, ಪ್ರಮುಖರಾದ ಸುನೀಲ್ ಮಾಲಿಪಾಟೀಲ್, ಜಿ.ಶ್ರೀನಿವಾಸ್, ವಿ.ರಾಮಲಿಂಗಯ್ಯ, ಎಸ್.ಡಿ.ಬಸವರಾಜ ಇತರರಿದ್ದರು.
ಕಂಪ್ಲಿ : ವೈಭೋಗದ ಜೀವನಕ್ಕಿಂತ ವೈರಾಗ್ಯ ಜೀವನ ಶ್ರೇಷ್ಠ ಎಂಬುದು ಪಂಪನ ಆದಿಪುರಾಣದ ಮೂಲ ಆಶಯವಾಗಿದೆ ಎಂದು ಶಿಕ್ಷಕ ಸುನೀಲ್ ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಚೇತನ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಉಡುಪಿ ಪದ್ಮಾವತಮ್ಮ ರಘುರಾಮಾಚಾರ್, ರುಕ್ಮಿಣಮ್ಮ ಎಸ್.ಎಂ.ನಾರಾಯಣಶೆಟ್ಟಿ ಹಾಗೂ ಎಂ.ಪಿ.ಪ್ರಕಾಶ್ ದತ್ತಿ ಕಾರ್ಯಕ್ರಮದಲ್ಲಿ ‘ಪಂಪನ ಆದಿಪುರಾಣ ಮತ್ತು ದಾಸ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದರು.
ಇಹಲೋಕದ ವೈಭೋಗವನ್ನು ಬೆನ್ನೆತ್ತಿ ಹೋಗುವ ಬದಲಿಗೆ ವೈರಾಗ್ಯವನ್ನು ಅಳವಡಿಸಿಕೊಂಡರೆ ಮೋಕ್ಷ ಗಳಿಸಲು ಸಾಧ್ಯವಿದೆ. ವೈಚಾರಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಕೀರ್ತನೆಗಳ ಮೂಲಕ ಸಮಾಜ ನಿರ್ಮಿಸಲು ದಾಸ ಸಾಹಿತ್ಯದ ಕೊಡುಗೆ ಮಹತ್ವದ್ದಾಗಿದೆ. ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳಿವೆ ಎಂದರು.
ಚೇತನ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಮಾತೃಭಾಷೆ ಮೀರಿದ ಇನ್ನೊಂದು ಭಾಷೆಯಿಲ್ಲ. ವಿದ್ಯಾರ್ಥಿ ಹಂತದಲ್ಲೇ ಮಾತೃಭಾಷೆಯ ವೈಶಾಲ್ಯತೆ ಅಳವಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದರು. ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಎ.ಸಿ.ದಾನಪ್ಪ, ಅಂಬಿಗರ ಮಂಜುನಾಥ, ಸೋಮನಾಥ ಭೂಪಾಳ ಅವರನ್ನು ಗೌರವಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಅಂಬಿಗರ ಮಂಜುನಾಥ, ಬಂಗಿ ದೊಡ್ಡಮಂಜುನಾಥ, ವಿ.ರಾಮಲಿಂಗಯ್ಯ, ಎಲಿಗಾರ ವೆಂಕಟರೆಡ್ಡಿ, ಶಿಕ್ಷಕಿ ಮಂಜುಳಾ ಇತರರಿದ್ದರು.