ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಅಧಿವೇಶನ ಕಾರ್ಯಕ್ರಮವನ್ನು ಆರ್ಥಿಕ ವಿಶ್ಲೇಷಕ ಪ್ರೊ.ಟಿ.ಆರ್. ಚಂದ್ರಶೇಖರ್ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸಾ.ರಘುನಾಥ, ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ, ಪ್ರೊ.ಡಾ. ಹುಚ್ಚುಸಾಬ್, ಸಿಎ ಸಿರಿಗೇರಿ ಪನ್ನರಾಜ್, ನಾನಾ ಸಂಘಟನೆ ಮುಖಂಡರಾದ ಶ್ರೀಕಾಂತ ರೆಡ್ಡಿ, ಜಿ.ಕೆ.ನಾಗರಾಜ, ಶ್ರೀಶೈಲ ಆಲದಳ್ಳಿ, ಈರಣ್ಣ, ಸೋಮಪ್ಪ, ಲೇಪಾಕ್ಷಿ, ಓಂಕಾರಿ, ಸಂಜೀವರೆಡ್ಡಿ ಇದ್ದರು
ಬಳ್ಳಾರಿ : ಸದ್ಯ ವಿದೇಶಿ ಒಪ್ಪಂದದ ಹೆಸರಲ್ಲಿ ಭಾರತ ಹಾಗೂ ಅಮೆರಿಕಾ ಮಧ್ಯೆ ನಡೆದ ಒಪ್ಪಂದವು ಮತ್ತೊಮ್ಮೆ ದೇಶವನ್ನು ಗುಲಾಮಗಿರಿಯ ಕಡೆಗೆ ವಾಲುವಂತೆ ಮಾಡಿದೆ ಎಂದು ವಕೀಲ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಕಳವಳ ವ್ಯಕ್ತಪಡಿಸಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಭಾರತ-ಯುಎಸ್ ವಾಣಿಜ್ಯ ವ್ಯಾಪಾರ ಒಪ್ಪಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲೆ ಆಗಲಿರುವ ಪರಿಣಾಮಗಳ ಕುರಿತು ಬುಧವಾರ ಆಯೋಜಿಸಿದ್ದ ಜಾಗೃತಿ ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತವೂ ಕೃಷಿ ಪ್ರಧಾನವಾದ ದೇಶವಾಗಿತ್ತು. ವ್ಯಾಪಾರದ ಹೆಸರಿನಲ್ಲಿ ಬಂದ ವಿದೇಶಿಗರು ಹಂತ ಹಂತವಾಗಿ ಭಾರದ ಮಾರುಕಟ್ಟೆ ಆಕ್ರಮಿಸಿಕೊಂಡು ಇಡೀ ಭಾರತದಲ್ಲಿನ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡರು. ತಮ್ಮ ವಾಣಿಜ್ಯ ವ್ಯಾಪಾರದ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡರು. ಅವರನ್ನು ದೇಶದಿಂದ ಹೊರಹಾಕಲು ಹಲವು ವರ್ಷಗಳ ಕಾಲ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮೆಲುಕು ಹಾಕಿದರು.
ಆರ್ಥಿಕ ವಿಶ್ಲೇಷಕ ಪ್ರೊ.ಟಿ.ಆರ್. ಚಂದ್ರಶೇಖರ್ ಮಾತನಾಡಿ, ಕಳೆದ ತಿಂಗಳು ಭಾರತ ಮತ್ತು ಅಮೆರಿಕದ ಮಧ್ಯೆ ನಡೆದ ವಾಣಿಜ್ಯ ಒಪ್ಪಂದವು ದೇಶಕ್ಕೆ ಕರಾಳ ದಿನಗಳ ಆರಂಭಕ್ಕೆ ಮುನ್ನುಡಿ ಬರೆದಿದೆ. ಈ ಒಪ್ಪದಂದಲ್ಲಿ ಭಾರತದ ಹಿತಾಸಕ್ತಿಗಿಂತಲೂ ಅಮೆರಿಕ ದೇಶದ ಹಿತಾಸಕ್ತಿ ಕಾಯುವ ಒಪ್ಪಂದ ಇದಾಗಿದೆ. ಅಮೆರಿಕಾದ ಸರಕುಗಳು ಭಾರತದೊಳಗಿನ 140 ಕೋಟಿ ಜನರನ್ನು ಗುರಿಯಾಗಿಸಿಕೊಂಡು ದೊಡ್ಡ ಮಾರುಕಟ್ಟೆ ಅಮೆರಿಕಾದ ವಸ್ತುಗಳಿಗೆ ತೆರಿಗೆ ರಹಿತವಾಗಿ ಬಾಗಿಲು ತೆರೆದಿದೆ. ಭಾರತ ದೇಶದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಶೇ. 18% ತೆರಿಗೆ ವಿಧಿಸಿರುವುದು ಭಾರತದ ದೇಶದ ಉತ್ಪನ್ನಗಳು ಮಾರಾಟವಾಗದೆ ಇರುವ ಭೀತಿ ಕಾಡುತ್ತಿದೆ. ಭಾರತಕ್ಕೆ ಹಲವು ವರ್ಷಗಳಿಂದ ಕಡಿಮೆ ಬೆಲೆಗೆ ರಷ್ಯಾದಿಂದ ಸಿಗುತ್ತಿದ್ದ ಪೆಟ್ರೋಲ್ ದುಬಾರಿ ಬೆಲೆತೆತ್ತು ಅಮೇರಿಕಾದಿಂದ ಖರೀದಿಸುವ ಪರಿಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.