ಕಂಪ್ಲಿ: ಜೀವನದಲ್ಲಿನ ನಾನಾ ಅಡೆತಡೆಗಳ ನಿವಾರಣೆಗೆ ಸ್ಕಂದ ಷಷ್ಠಿ ಆಚರಣೆ ಅತ್ಯುತ್ತಮ ಪರಿಹಾರ ಎಂದು ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ ಹೇಳಿದರು.
ಕಲ್ಯಾಣಚೌಕಿಮಠದಲ್ಲಿ ಸ್ಕಂದ ಷಷ್ಠಿ ನಿಮಿತ್ತ ಭಾನುವಾರ ಸುಬ್ರಹ್ಮಣ್ಯ ಸಮೇತ ನಾಗದೇವತೆಯ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಹಿಂದೂಗಳ ಪ್ರಕಾರ ಸ್ಕಂದ ಷಷ್ಠಿ ಆಚರಣೆ ಪವಿತ್ರವಾಗಿದ್ದು, ಸುಬ್ರಹ್ಮಣ್ಯಸ್ವಾಮಿ ಆರಾಧನೆಯಿಂದ ದುಷ್ಟ ಶಕ್ತಿಗಳ ಮೇಲೆ ದೈವಿಕ ಶಕ್ತಿಯ ವಿಜಯವನ್ನು ಪಡೆಯಲು, ಕತ್ತಲೆಯಿಂದ ಬೆಳಕಿನತ್ತ ಸಾಗಲು ಸಾಧ್ಯ. ಅಡೆತಡೆಗಳಿಗೆ ಹೆದರದೆ ಆಧ್ಯಾತ್ಮಿಕ ಉನ್ನತಿ ಸಾಧಿಸುವ ಮೂಲಕ ಸುಬ್ರಹ್ಮಣ್ಯ ದೇವರ ಅನುಗ್ರಹ ಗಳಿಸಲು ಮುಂದಾಗಬೇಕು ಎಂದರು.
ಸ್ಕಂದ ಷಷ್ಠಿ ನಿಮಿತ್ತ ಭಕ್ತರು ಉಪವಾಸ ಆಚರಿಸಿದರು. ನಾಗದೇವತೆ, ಸುಬ್ರಹ್ಮಣ್ಯದೇವತೆಗೆ ಪಂಚಾಮೃತ ಅಭಿಷೇಕ, ಪೂಜೆ, ಹಣ್ಣು, ಹಾಲು ನೈವೇದ್ಯ ಅರ್ಪಿಸಿದರು.
ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಸ್ಕಂದ, ಸುಬ್ರಹ್ಮಣ್ಯದೇವತೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.