ಗ್ರಾಮೀಣದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭ

ಎಚ್.ಡಿ.ರಾಜೇಶ್
ಎಚ್.ಡಿ.ರಾಜೇಶ್
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿಯ ಹೆಚ್ಚು ನಿಖರ
  • ಸಿಬ್ಬಂದಿಗೆ ತರಬೇತಿ
ಬಳ್ಳಾರಿ : ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಹೆಚ್ಚು ನಿಖರ ಮತ್ತು ಪಾರದರ್ಶಕವಾಗಿಸುವ ಉದ್ದೇಶದಿಂದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಸೇರ್ಪಡೆ, ಸ್ಥಳಾಂತರ ಹಾಗೂ ಹೆಸರು ತೆಗೆದುಹಾಕುವ ಕಾರ್ಯವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದು ಎಸಿ ಎಚ್.ಡಿ.ರಾಜೇಶ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2025ರ ಅಂತಿಮ ಮತದಾರರ ಪಟ್ಟಿಯನ್ನು ಆಧಾರವಾಗಿಸಿಕೊಂಡು ಪ್ರಸ್ತುತ ಮ್ಯಾಪಿಂಗ್ ಮತ್ತು ಪರಿಶೀಲನೆ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು 2,51,227 ಮತದಾರರಿದ್ದು, ಈ ಪೈಕಿ 2,44,275 ಮತದಾರರ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಸುಮಾರು 7,002 ಮತದಾರರ ಮಾಹಿತಿಯನ್ನು ಶೀಘ್ರದಲ್ಲೇ ಪರಿಶೀಲಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಗ್ರಾಮೀಣ, ಮೋಕಾ, ಕೌಲ್‌ಬಜಾರ್ ಹಾಗೂ ರೂಪನಗುಡಿ ಭಾಗಗಳಲ್ಲಿ ಪರಿಷ್ಕರಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಿದ್ದಾರೆ ಎಂದರು. ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಅಲ್ಲದೆ, ಬಿಎಲ್‌ಒಗಳು ಹಾಗೂ ಸಂಬಂಧಿತ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಜೂ.30ರಿಂದ ಜು.29ರವರೆಗೆ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಈ ಅವಧಿಯಲ್ಲಿ ರಜೆ ಇರುವುದಿಲ್ಲ. ಕುಟುಂಬದ ಎಲ್ಲ ಸದಸ್ಯರ ಪರವಾಗಿ ಮನೆಯ ಯಜಮಾನರು ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು. ತಹಸೀಲ್ದಾರ್ ಟಿ.ರೇಖಾ, ತಾಪಂ ಇಒ ಶ್ರೀಧರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net