ಕೊಟ್ಟೂರು ತಾಲೂಕು ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು. ತಹಸೀಲ್ದಾರ್ ಅಮರೇಶ ಜಿಕೆ, ಉಪನ್ಯಾಸಕ ಡಾ.ಜಗದೀಶ ಚಂದ್ರಭೋಸ್, ಗ್ರೇಡ್-2 ತಹಸಿಲ್ದಾರ್ ಎಂ ಪ್ರತಿಭಾ, ಶಿರಸ್ತೇದಾರ್ ಕೆ ಎಂ ಕೊಟ್ರಮ್ಮ ,ಉಪತಹಸಿಲ್ದಾರ್ ಅನ್ನದಾನೇಶ ಬಿ ಪತ್ತಾರ್, ವಿಶ್ವಕರ್ಮ ಸಮಾಜದ ಪ್ರಮುಖ ಕಾಳಾಚಾರಿ ಇತರರಿದ್ದರು.
ಕೊಟ್ಟೂರು: ಜಕಣಾಚಾರಿ ತಮ್ಮ ಅದ್ಭುತ ಶಿಲ್ಪ ಕಲೆಯಿಂದ ಭಾರತವನ್ನು ಇಡೀ ವಿಶ್ವವೇ ಕಣ್ಣರಳಿಸಿ ನೋಡುವಂತೆ ಕಲಾ ಸೌಂದರ್ಯವನ್ನ ಶ್ರೀಮಂತಗೊಳಿಸಿದ್ದಾರೆ ಎಂದು ಉಪನ್ಯಾಸಕ ಡಾ.ಜಗದೀಶ ಚಂದ್ರಭೋಸ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಲೂರು-ಹಳೇಬೀಡು ದೇವಸ್ಥಾನಗಳ ಜತೆ ಸುಮಾರು 600ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜಕಣಚಾರಿ ಕಟ್ಟಿದ್ದರೂ ಎಲ್ಲೂ ತಮ್ಮ ಹೆಸರನ್ನು ಕಾಣಿಸಿಲ್ಲ, ನಮ್ಮ ಕೆಲಸವನ್ನು ಸ್ಮರಿಸಬೇಕೇ ವಿನಃ ನಮ್ಮ ಹೆಸರನ್ನಲ್ಲ ಎನ್ನುವ ಉದಾತ್ತ ಧೋರಣೆ ಉಳ್ಳವರಾಗಿದ್ದರು ಎಂದರು.
ತಹಸೀಲ್ದಾರ್ ಅಮರೇಶ ಜಿಕೆ ಮಾತನಾಡಿ, ವ್ಯಕ್ತಿ ತನ್ನ ಸಾಧನೆ ಮೂಲಕ ಜೀವಂತವಾಗಿ ಉಳಿಯುತ್ತಾನೆ. ಜಕಣಾಚಾರಿ ಕಲೆಯ ಮೂಲಕ ದೇವಸ್ಥಾನಗಳನ್ನು ನಿರ್ಮಿಸಿ ಭಾರತ ಶಿಲ್ಪಕಲೆಯನ್ನು ಶ್ರೀಮಂತಿಕೆಗೊಳಿಸಿ ಇಂದಿಗೂ ಅಮರವಾಗಿ ಉಳಿದಿದ್ದಾರೆ ಎಂದರು.