ದೇವರೆಲ್ಲ ಒಂದೇ ಸಂದೇಶ ಸಾರಿದ್ದ ಶರಣಬಸಪ್ಪ

ಸಿರಗುಪ್ಪ ತಾಲೂಕಿನ ಹೆರಕಲ್ ಗ್ರಾಮದಲ್ಲಿ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ರೌಡಕುಂದಿಯ ಶ್ರೀ ಶಿವಯೋಗಿ ಶಿವಾಚಾರ್ಯರು ಉದ್ಘಾಟಿಸಿದರು.
ಸಿರಗುಪ್ಪ ತಾಲೂಕಿನ ಹೆರಕಲ್ ಗ್ರಾಮದಲ್ಲಿ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ರೌಡಕುಂದಿಯ ಶ್ರೀ ಶಿವಯೋಗಿ ಶಿವಾಚಾರ್ಯರು ಉದ್ಘಾಟಿಸಿದರು.
Published on
ಸಿರಗುಪ್ಪ: ಶರಣರು ಮಾನವನ ಶ್ರೇಯೋಭಿವೃದ್ಧಿ ಹಾಗೂ ಸಮಾಜದ ಉದ್ಧಾರಕ್ಕಾಗಿ ಆಧ್ಯಾತ್ಮಿಕ ಶಕ್ತಿಯನ್ನು ಧಾರೆ ಎರೆದಿದ್ದಾರೆ ಎಂದು ರೌಡಕುಂದಿ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಬಳಗಾನೂರು ಮರಿ ಶಿವಯೋಗಿಗಳ 46ನೇ ವರ್ಷದ ಪುಣ್ಯಾರಾಧನೆ ಹಾಗೂ ಶಿವಶರಣ ಮರಿತಾತ ಅವರ 38ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹೆರಕಲ್ ಗ್ರಾಮದ ಬಳಗಾನೂರು ಮರಿ ಶಿವಯೋಗಿಗಳ ಮಠದಲ್ಲಿ ಆಯೋಜಿಸಿದ್ದ ಕಲಬುರುಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಶರಣರಲ್ಲಿ ಕಲಬುರಗಿಯ ಶರಣಬಸಪ್ಪ ಅವರು ಅತ್ಯಂತ ಪ್ರಮುಖರಾಗಿದ್ದು, ಕಲಬುರಗಿಯಲ್ಲಿ ಹಿಂದೂ, ಮುಸ್ಲಿಮರು ಭಾವೈಕ್ಯದಿಂದ ಜೀವಿಸಲು ಕಾರಣರಾದರು. ಬಂದೇನವಾಜ್ ದರ್ಗಾದಲ್ಲಿ ಪವಾಡದ ಮೂಲಕ ಅಲ್ಲಿನ ಮುಸ್ಲಿಮರ ಪ್ರೀತಿ ಗಳಿಸಿ ಎಲ್ಲ ದೇವರು ಒಂದೇ ಎಂಬ ಸಂದೇಶವನ್ನು ನಾಡಿಗೆ ಸಾರಿದರು. ಹೆರಕಲ್ಲಿನ ಮಠದಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪುರಾಣ ಪ್ರವಚನ, ಜಾತ್ರಾ ಮಹೋತ್ಸವದಂತಹ ಕಾರ್ಯಕ್ರಮಗಳನ್ನ ನೆರವೇರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಂಡಿತ ಕಲ್ಲಿನಾಥ ಶಾಸ್ತ್ರಿ ದ್ಯಾಂಪುರ ವಿರಚಿತ ಕಲಬುರಗಿ ಶರಣಬಸವೇಶ್ವರ ಮಹಾಪುರಾಣ ಪ್ರವಚನವನ್ನು ಮಹಾರಾಜ ಪೇಟೆಯ ಪ್ರಭಯ್ಯ ಶಾಸ್ತ್ರಿ ವಾಚಿಸಿದರು. ಜಗನ್ನಾಥ ಗವಾಯಿ ಸಂಗೀತ, ಮೌನೇಶ ಆಚಾರಿ ಹಾಗೂ ಕೆ.ಬಸವರಾಜ ತಬಲಾ ಸಾಥ್ ನೀಡಿದರು.
ಹೆರಕಲ್ ಮಠದ ಮಾತೃಶ್ರೀ ಭುವನೇಶ್ವರಿ ಅಮ್ಮ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಿ.ಎಂ.ಜಡೇಸ್ವಾಮಿ, ಶಿಕ್ಷಕ ಡಾ.ದಿವಾಕರ್ ನಾರಾಯಣ, ಪ್ರಾಚಾರ್ಯ ಬಸವನಗೌಡ, ಅತಿಥಿ ಉಪನ್ಯಾಸಕ ವೀರೇಶ್ ಕುಂಬಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net