ರಂಗತೋರಣ ಸಂಸ್ಥೆ ಪುರಸ್ಕಾರಕ್ಕೆ ಆಯ್ಕೆ

ವೀಣಾ ಆದವಾನಿ
ವೀಣಾ ಆದವಾನಿ
Published on

ಪ್ರಮುಖ ಮುಖ್ಯಾಂಶಗಳು

  • ಸಹಕಲಾವಿದರಿಗೆ ನಟನೆಯ ಸೂತ್ರ
  • ನಾಟಕದ ಮೂಲಕ ರಂಗ ಪ್ರವೇಶ
ಬಳ್ಳಾರಿ : ರಂಗತೋರಣ ಸಂಸ್ಥೆಯೂ ಪ್ರತಿವರ್ಷ ಕೊಡಮಾಡುವ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೆ 2024ನೇ ಸಾಲಿಗೆ ಗ್ರಾಮೀಣ ರಂಗಭೂಮಿಯ ನೃತ್ಯ ಕಲಾವಿದೆ ವೀಣಾ ಆದವಾನಿ, 2025ನೇ ಸಾಲಿಗೆ ವೃತ್ತಿ ರಂಗಭೂಮಿಯ ನಿರ್ದೇಶಕ ವಿಜಯಪುರದ ಶ್ರೀಧರ ಹೆಗಡೆ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಜೂ.12, 13 ಹಾಗೂ ಜೂ.14ರಂದು ನಡೆಯವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದರು.
ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಸ್ಮರಣೆಯಲ್ಲಿ 2016ರಿಂದ ಆರಂಭಿಸಿದ್ದು, ರಾಜ್ಯಮಟ್ಟದ ಈ ಪುರಸ್ಕಾರ ನಾಡಿನ ಹಿರಿಯ ರಂಗಕರ್ಮಿಗಳಿಗೆ ನೀಡಲಾಗುತ್ತಿದ್ದು, 25 ಸಾವಿರ ರೂ. ನಗದು ಹಾಗೂ ಆಕರ್ಷಕ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದರು.
2016ರಲ್ಲಿ ನಟಿ ಡಾ.ಬಿ.ಜಯಶ್ರೀ, 2017ರಲ್ಲಿ ರಂಗಜಂಗಮ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, 2018ರಲ್ಲಿ ಹಿರಿಯ ನಾಟಕಕಾರ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ , 2019ರಲ್ಲಿ ಕಲಾವಿದ ರಾಮಕೃಷ್ಣ ಕನ್ನರ್ಪಾಡಿ, 2020ರಲ್ಲಿ ಹಿರಿಯ ಕಲಾವಿದ ಶೇಷಗಿರಿಯ ಪ್ರಭುಗುರಪ್ಪನವರ, 2023ರಲ್ಲಿ ಹಿರಿಯ ಕಲಾವಿದೆ ಡಿ.ಹನುಮಕ್ಕ ಅವರಿಗೆ ನೀಡಿದೆ ಎಂದು ವಿವರಿಸಿದರು.
ಕಲಾವಿದೆ ವೀಣಾ ಆದವಾನಿ ಏಳನೇ ವಯಸ್ಸಿನಲ್ಲಿಯೇ ‘ಅಣ್ಣ ತಮ್ಮ ’ ನಾಟಕದ ಮೂಲಕ ರಂಗ ಪ್ರವೇಶ ಮಾಡಿ ಪೌರಾಣಿಕ , ಐತಿಹಾಸಿಕ, ಸಾಮಾಜಿಕ ನಾಟಕಗಳ ಎಲ್ಲ ಪಾತ್ರಗಳಲ್ಲಿ ಸೇರಿ 3500ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಸಿದ್ದಾರೆ ಎಂದರು. ನಿರ್ದೇಶಕ ಶ್ರೀಧರ ಹೆಗಡೆ ಅವರು ಹಾಸ್ಯಪಾತ್ರದಿಂದ ಹಿಡಿದು ನಾಯಕ, ಖಳನಾಯಕ, ಪೋಷಕ, ಸ್ತ್ರೀ ಪಾತ್ರವನ್ನೂ ಯಶ್ವಸಿಯಾಗಿ ನಿಭಾಯಿಸಿದ್ದಲ್ಲದೇ ನೂರರು ಸಹಕಲಾವಿದರಿಗೆ ನಟನೆಯ ಸೂತ್ರಗಳನ್ನು ಕಲಿಸದ ಗುರುಯಾಗಿದ್ದಾರೆ. ಇದರ ಜತೆಗೆ ನಾಟಕಗಳ ನಿರ್ದೇಶಕ , ಬೇರೆಯವರ ಕಂಪನಿಯ ಸಂಘಟಕ, ನಾಟಕಗಳ ಸಂಚಾಲಕ ಹೀಗೆ ರಂಗಭೂಮಿಯ ಎಲ್ಲ ಮಜಲುಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ ಎಂದರು. ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net