ಕೊಟ್ಟೂರು: ಜಿಲ್ಲೆಯಲ್ಲಿ ಜಾನುವಾರು, ಕುರಿ ಹಾಗೂ ಮೇಕೆಗಳ ಸಂಖ್ಯೆಗೆ ಅನುಗುಣವಾಗಿ 400 ಪಶು ವೈದ್ಯರಿರಬೇಕು. ಆದರೆ 140 ವೈದ್ಯರಿದ್ದು, ರೈತರು ತಾಳ್ಮೆಯಿಂದ ಸೇವೆ ಪಡೆಯಬೇಕು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರವಿ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಣೆ ಕುರಿತು ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ವಿಜಯನಗರ ಜಿಲ್ಲೆಯಲ್ಲಿ 1,180 ಹಸು ಮತ್ತು ಎಮ್ಮೆಗಳಿದ್ದವು. ಈ ಪೈಕಿ 1,120 ಇವೆ. 60 ಎಮ್ಮೆ, ಹಸುಗಳು ಕಡಿಮೆಯಾಗಿವೆ ಕಾರಣ ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ 12,500 ಕುರಿ ಮತ್ತು ಮೇಕೆಗಳಿವೆ. ಕೊಟ್ಟೂರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಇಲ್ಲಿನ ಉಷ್ಣ ವಾತಾವರಣ ಕಾರಣವಾಗಿದೆ. ಅಮೃತ ಸ್ವಾಭಿಮಾನಿ ಯೋಜನೆಯ ಫಲಾನುಭವಿಗಳು ಸಾಲ ಮರು ಪಾವತಿ ಮಾಡದ ಕಾರಣ ಕುರಿಗಾರರಿಗೆ ಪೂರೈಕೆಯಾಗಬೇಕಿದ್ದ ಸೌಲಭ್ಯಗಳಲ್ಲಿ ಕಡಿತವಾಗತೊಡಗಿವೆ ಎಂದರು.
ವೈದ್ಯರಾದ ಕೊಟ್ರೇಶ, ಚಂದ್ರನಾಯ್ಕ, ವಿಲಾಸ್, ವಿಜಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೀಶ್ವರ ದಿನ್ನಿ, ರೇವಣ್ಣ ನಾಯ್ಕ, ಅಂಬರೀಶ ನಾಯ್ಕ, ಮೂಗಪ್ಪ ಇತರರಿದ್ದರು.