ಸಂಡೂರು ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ದರೋಜಿ ಕೆರೆಯಲ್ಲಿ ಮೀನುಗಳು ಸತ್ತಿರುವುದನ್ನು ಸಹಾಯಕ ಪರಿಸರ ಅಧಿಕಾರಿಗೆ ಶಾಸಕಿ ಅನ್ನಪೂರ್ಣ ತುಕಾರಾಮ್ ತೋರಿಸುತ್ತಿರುವುದು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನೂರುದ್ದೀನ್, ಗ್ರೇಡ್-2 ತಹಸೀಲ್ದಾರ್ ಸುಧಾ ಅರಮನೆ, ತಾಪಂ ಎಡಿಗಳಾದ ಮಹೇಶ್ ಕುಮಾರ್, ವಸಂತರಾಜ್ ಇತರರಿದ್ದರು.
ತಾಪಂ ಎಂ.ವೈ. ಘೋರ್ಪಡೆ ಸಭಾಂಗಣದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಸೋಮವಾರ ನಡೆಯಿತು.
ಬಿಇಒ ಡಾ.ಐ.ಆರ್. ಅಕ್ಕಿ ಮಾತನಾಡಿ, ತಾಲೂಕಿನ 176 ಶಾಲೆಗಳಲ್ಲಿ 128 ಶಿಕ್ಷಣ ಇಲಾಖೆ ಹೆಸರಿಗೆ ನೋಂದಣಿಗೊಂಡಿದ್ದು 48 ಬಾಕಿ ಇವೆ. ವಿಷಯಾಧಾರಿತ ಶಿಕ್ಷಕರ ಕೊರತೆ ಇರುವೆಡೆ ಅತಿಥಿ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತಿದೆ. 14 ಶಿಕ್ಷಕ ರಹಿತ ಶಾಲೆಗಳಿದ್ದು, ಪಕ್ಕದ ಗ್ರಾಮಗಳಿಂದ ಶಿಕ್ಷಕರನ್ನು ಕರೆಸಿ ಕಾರ್ಯನಿರ್ವಹಿಸಲಾಗುತ್ತಿದೆ. ಎಸ್‌ಐಆರ್, ಮನೆ ಸರ್ವೇ ಇತರ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದರು.
ಸಿಡಿಪಿಒ ಪಿ.ನಾಗರಾಜ್ ಮಾತನಾಡಿ, ಕಳೆದ ವರ್ಷ ತಾಲೂಕಿನ 93 ಬಾಲ್ಯ ವಿವಾಹ ಪ್ರಕರಣಗಳಲ್ಲಿ 52 ಎಫ್‌ಐಆರ್ ದಾಖಲಾಗಿದ್ದು, ಈ ವರ್ಷ ಕಡಿಮೆಯಾಗಿವೆ ಎಂದರು.
ಟಿಎಚ್‌ಒ ಹರೀಶ್, 200 ಹಾಸಿಗೆಗಳ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಪ್ರಸ್ತಾಪಿಸಿ, ನಿವೇಶನ ಆರೋಗ್ಯ ಇಲಾಖೆ ಹೆಸರಿಗೆ ನೋಂದಣಿಯಾಗಿದೆ. ಡಿಪಿಆರ್ ಡಿಎಚ್‌ಒ ಕಚೇರಿಗೆ ವಾಪಸ್ ಬಂದಿದ್ದು, ಅದನ್ನು ಮತ್ತೊಮ್ಮೆ ಕಳುಹಿಸಲಾಗುವುದು. ಯಶವಂತನಗರ, ಭುಜಂಗನಗರ, ದರೋಜಿಯಲ್ಲಿ ಜಾಗ ಸಿಕ್ಕಿದೆ ಆದರೆ, ಕುರೇಕುಪ್ಪದಲ್ಲಿ ಜಾಗ ಗುರುತಿಸಲಾಗುವುದು ಎಂದು ತಿಳಿಸಿದರು.
ಶಾಸಕಿ ಮಾತನಾಡಿ, ತಾಲೂಕಿನ ಜನರನ್ನು ಬಾಧಿಸುತ್ತಿರುವ ರೋಗಗಳ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಟಿಎಚ್‌ಇ ಪ್ರತಿಕ್ರಿಯಿಸಿ, ಚರ್ಮ ರೋಗ ಹೆಚ್ಚಾಗಿದೆ. ಆದರಲ್ಲೂ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಅಧಿಕವಿದ್ದು, ತಾವು ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ತಾಲೂಕಿನಲ್ಲಿ 4 ಡೆಂೆ ಪಾಸಿಟಿವ್ ಕೇಸ್‌ಗಳಿವೆ. ಚೋರುನೂರಿನಲ್ಲಿ ಒಬ್ಬ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದ ಕಾರಣ ಆತನ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಆಯುಷ್ ವೈದ್ಯ ವಿರೂಪಾಕ್ಷಪ್ಪ ವಿರುದ್ಧ ಕಿಡಿಕಾರಿದ ಶಾಸಕಿ, ನಿಮ್ಮ ಬಗ್ಗೆ ಬಹಳ ಆರೋಪಗಳಿವೆ. ನೀವು ಎಲ್ಲೆಲ್ಲಿ ಔಷಧಗಳನ್ನು ಬೀಸಾಡಿದ್ದೀರಿ, ಏನು ಮಾಡಿದ್ದೀರಿ ಅಂತ ಗೊತ್ತಿದೆ. ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮಕ್ಕೆ ಉನ್ನತ ಅಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಕೈಗಾರಿಗಳ ತ್ಯಾಜ್ಯ ನೀರನ್ನು ದರೋಜಿ ಕೆರೆಗೆ ಹರಿಸಿದ್ದರಿಂದ ಲಕ್ಷಾಂತರ ಮಿನುಗಳು ಸತ್ತು ಹೋಗಿವೆ. ಈ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಜಾನುವಾರುಗಳು ಕುಡಿದು ತೊಂದರೆ ಆದರೆ ಯಾರು ಹೊಣೆ?. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಹಾಯಕ ಪರಿಸರ ಅಧಿಕಾರಿಗೆ ನಿದೇಶನ ನೀಡಿದರು.
ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿ, ಜೆಜೆಎಂ ಯೋಜನೆ ಅಂತಾಪುರ, ಮೆಟ್ರಿಕಿ, ವಿಠಲಾಪುರ, ರಾಜಾಪುರ, ಕೋಡಾಲ ಭಾಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ನೀರು ಹೆಚ್ಚಾಗಿ ಪೋಲಾಗುತ್ತಿದ್ದು ಮಿತ ಬಳಕೆಗೆ ಸೂಚಿಸಿ. ಇಲ್ಲವೇ ಮೀಟರ್ ಅಳವಡಿಸಿ ಶುಲ್ಕ ವಿಧಿಸಿ ಎಂದು ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.
ಗೊಲ್ಲರಟ್ಟೀಲಿ ಮೂಢನಂಬಿಕೆ ಜೀವಂತ
ನಾನು ಗೊಲ್ಲರಟ್ಟಿಗೆ ಹೋಗಿದ್ದೆ. ಅಲ್ಲಿ ಈಗಲೂ ಮೂಢನಂಬಿಕೆ ಜೀವಂತ ಇರುವುದನ್ನು ಕಂಡು ಬೆರಗಾದೆ. ಸಂಪ್ರದಾಯ ಹೆಸರಿನಲ್ಲಿ ಗರ್ಭಿಣಿ-ಬಾಣಂತಿ ಮತ್ತು ಮಗುವನ್ನು ಸೂಕ್ತ ರಕ್ಷಣೆ ಇಲ್ಲದೆ ತಾಡಪಾಲ್ ಹಾಸಿ ಅದರ ಮೇಲೆ ಮಲಗಿಸಲಾಗಿದೆ. ಇಂತಹ ಸ್ಥಿತಿ ಕಂಡು ಕ್ರಮ ಕೈಗೊಳ್ಳಲು ನಿಮಗೇನು ತೊಂದರೆ. ಮಾನವೀಯ ಮೌಲ್ಯ ಸತ್ತುಹೋಗಿದೆ. ಇದನ್ನೂ ವಿಶ್ವವಿದ್ಯಾಲಯ ಪ್ರೊಫೇಸರ್ ಕರೆಸಿ ಪಾಠ ಮಾಡಿಸಬೇಕೆ? ಎಂದು ಅಧಿಕಾರಿಗಳ ವಿರುದ್ಧ ಶಾಸಕಿ ಅನ್ನಪೂರ್ಣ ತುಕಾರಾಮ್ ಹರಿಹಾಯ್ದರು.