ನಾಳೆಯಿಂದ ಸಂಗಂ ಸಾಹಿತ್ಯ ಪುರಸ್ಕಾರ

ಯೋಗಾನಂದರೆಡ್ಡಿ
ಯೋಗಾನಂದರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಪುರಸ್ಕಾರ
ಬಳ್ಳಾರಿ : ಗಡಿಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆ ಉಳಿಸಿ ಬೆಳೆಸುವ ಉದ್ದೇಶದಿಂದ ಸಂಗಂ ಟ್ರಸ್ಟ್ ವತಿಯಿಂದ ಮೇ.9ರಿಂದ ಮೇ.10ರವರೆಗೆ ಅಂತರರಾಜ್ಯ ಮಟ್ಟದ ಸಾಹಿತ್ಯ ವಿಚಾರ ಸಂಕಿರಣ ಹಾಗೂ ದ್ರಾವಿಡ ಭಾಷಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ವೈ.ಸಿ.ಯೋಗಾನಂದರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸಂಗಂ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡು ದಿನಗಳ ಸಮ್ಮೇಳನವು ನಗರದ ಹೊರವಲಯದಲ್ಲಿರುವ ಜ್ಞಾನಾಮೃತ ಕಾಲೇಜಿನಲ್ಲಿ ನಡೆಯಲಿದೆ. ಈ ಬಾರಿ ವಿಶೇಷವಾಗಿ ಕನ್ನಡದ ಸಹೋದರಿ ಭಾಷೆಗಳಾದ ದ್ರಾವಿಡ ನುಡಿಗಳ ಸಾಹಿತ್ಯ ಪರಂಪರೆ ಪರಿಚಯಿಸುವ ಉದ್ದೇಶದಿಂದ ದ್ರಾವಿಡ ಬಳಗ ಭಾಷಾ ಬಾಂಧವ್ಯ ಸರಣಿಗೆ ಚಾಲನೆ ನೀಡಲಾಗುತ್ತಿದೆ. ಪ್ರಸ್ತುತ ಕನ್ನಡ-ತೆಲುಗು ಸಾಹಿತ್ಯದ ನುಡಿ ಸಾಂಗತ್ಯ ಕುರಿತ ಚರ್ಚೆಗಳು ನಡೆಯಲಿದ್ದು, 50ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮೊದಲ ದಿನ ಕಾರ್ಯಕ್ರಮವನ್ನು ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಉದ್ಘಾಟಿಸಲಿದ್ದು, ಟ್ರಸ್ಟ್ ಗೌರವಾಧ್ಯಕ್ಷ ಡಾ.ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್‌ನ ಉಸ್ತುವಾರಿ ಅಧಿಕಾರಿ ಡಾ. ಪತ್ತಿಪಾಕ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾವ್ಯ ಸಂವಾದದಲ್ಲಿ ಚಿದಾನಂದ ಸಾಲಿ, ರವಿಕುಮಾರ್ ಟೆಲೆಕ್ಸ್, ಭುವನಾ ಹಿರೇಮಠ, ನಾಗಣ್ಣ ಕಿಲಾರಿ (ಕನ್ನಡ) ಹಾಗೂ ತೆಲುಗು ಭಾಷೆಯ ತಗುಳ ಗೋಪಾಲ, ಕಲ್ಯಾಣ ಕುಂಜು, ಬಾಲಸುಧಾಕರ ಮೌಳಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಹಂತದ ಐದು ಮಂದಿ ಕವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವೈ.ಸಿ. ಯೋಗಾನಂದ ರೆಡ್ಡಿ ವಹಿಸಲಿದ್ದಾರೆ.
ಎರಡನೇ ದಿನದ ಕಥಾ ಸಮಯದಲ್ಲಿ ಮಾರುತಿ ಪೌರೋಹಿತಂ, ಪೂರ್ಣಿಮಾ ಮಾಳಿಗೆಮನಿ, ಶರಣಬಸವ ಗುಡದಿನ್ನಿ ಹಾಗೂ ಮೇಘನಾಥ ರೆಡ್ಡಿ ಭಾಗವಹಿಸಲಿದ್ದಾರೆ. ಯುವ ಪ್ರಕಾಶಕರ ತವಕ-ತಲ್ಲಣ ಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್, ಮಮತಾ ಸೂರ್ಯಕೀರ್ತಿ, ಚಾಂದ್ ಕವಿ ಚಂದ್ರ, ಶ್ರೀದಿವ್ಯ ಹಾಗೂ ಮಲ್ಲಿಕಾರ್ಜುನ್ ಶೇಷುಕೊರ್ಲಪಾಟಿ ಭಾಗವಹಿಸಲಿದ್ದಾರೆ.
ಸಂಜೆಯ ಕವಿಸಮಯದಲ್ಲಿ ನಾಗಿಣಿ ಅಪ್ಪಸಾನಿ, ಲಕ್ಷ್ಮಣ ವಿ.ಎ., ಸದಾಶಿವ ಸೊರಟೂರು ಹಾಗೂ ಆಶಾ ಜಗದೀಶ ಕವನ ವಾಚಿಸಲಿದ್ದಾರೆ. ತೆಲುಗಿನಲ್ಲಿ ಪಲ್ಲಿಪಟ್ಟು ನಾಗರಾಜ್, ಅನಿಲ್ ಡ್ಯಾನಿ, ನಾಗಜ್ಯೋತಿ ಶೇಖರ್ ವಾಚಿಸಲಿದ್ದಾರೆ. 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದ್ದು, ಪಲ್ಲವ ವೆಂಕಟೇಶ್ ನಡೆಸಿಕೊಡಲಿದ್ದಾರೆ. ರಾಜಶೇಖರ ಹಳೆಮನೆ ಹಾಗೂ ಮಂಜುಳಾ ಗೋನಾಳ್ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಪದಾಧಿಕಾರಿಗಳಾದ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು, ಬಸವರಾಜ್, ವೀರೇಶ್, ದಷ್ಟಗಿರಿ, ನಾಗರಾಜ್ ಬಸರಕೋಡು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net