ಬಳ್ಳಾರಿ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳ್ಳಾರಿ ವಲಯ ಕಚೇರಿಯಲ್ಲಿ 16.17 ಕೋಟಿ ರೂ. ದುರ್ಬಳಕೆಯಾದ ಆರೋಪದಡಿ ಕಚೇರಿಯ ಗುತ್ತಿಗೆ ನೌಕರ ಸಂತೋಷ ಸೇರಿ ಏಳು ಜನರ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊರಗುತ್ತಿಗೆ ನೌಕರನಾಗಿದ್ದ ಸಂತೋಷ ಕುಮಾರ್, ವಂಚನೆಗೆ ಸಹಕರಿಸಿದ ನಜೀರ್ ಅಹ್ಮದ್, ಕೆ.ಟಿ. ಶ್ರುತಿ, ಬೇಬಿ ಆಯಿಶಾ, ರಾಕೇಶ್ ಬಡಗಲ್, ವಿದ್ಯಾಲಕ್ಷ್ಮೀ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಸೇರಿ ಏಳು ಜನರ ವಿರುದ್ಧ ಮಾ.19ರಂದು ಪ್ರಕರಣ ದಾಖಲಾಗಿದೆ.
2025ರ ಅಕ್ಟೋಬರ್‌ನಲ್ಲಿ ವಜಾಗೊಂಡಿದ್ದ ಸಂತೋಷ ಕುಮಾರ್ ಪ್ರಮಖ ಆರೋಪಿ, ಅಧಿಕಾರಿಗಳ ನಕಲಿ ಸಹಿಗಳನ್ನು ಮಾಡಿ, ಕಚೇರಿಯ ಚೆಕ್‌ಗಳನ್ನು ಬಳಸಿಕೊಂಡು ಹಣವನ್ನು ಹಲವರಿಗೆ ವರ್ಗಾವಣೆ ಮಾಡಿದ ಆರೋಪ ಮೇಲಿದೆ. ಇಲಾಖೆಗೆ ಸಂಬಂಧಿಸಿದ ಚೆಕ್‌ಗಳ ಮೇಲೆ ನಕಲಿ ಹಾಗೂ ಕಚೇರಿಯ ಮುದ್ರೆ ಬಳಕೆಯಾಗಿದೆ. ಒಟ್ಟು 16.17 ಕೋಟಿ ರೂ. ಗಳನ್ನು ನಕಲಿ ಸಹಿ, ಸೀಲ್ ಬಳಸಿ ಮಂಡಳಿಯ ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಮಂಡಳಿಯ ಮೂವರು ಎಕ್ಸಿಕ್ಯೂಟಿವ್ ಇಂಜನಿಯರ್‌ಗಳ ಅವಧಿಯಲ್ಲಿ ವಂಚನೆ ನಡೆದಿರುವುದು ಪತ್ತೆಯಾಗಿದೆ. ಮಂಡಳಿಯ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಇಂಜನಿಯರ್ ಎಸ್.ಎಂ.ಕೊಳಲಗಿ ದೂರು ಆಧಾರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.