ಅಕ್ರಮ ಗಣಿಗಾರಿಕೆ ಜಂಟಿ ವಿಚಾರಣೆಗೆ ಕೋರಿಕೆ

ಟಪಾಲ್ ಗಣೇಶ್
ಟಪಾಲ್ ಗಣೇಶ್
Published on

ಪ್ರಮುಖ ಮುಖ್ಯಾಂಶಗಳು

  • ಒಎಂಸಿ ಗಡಿ ಒತ್ತುವರಿ ಪ್ರಕರಣ
  • ಆ.13ರಂದು ಸುಪ್ರಿಂ ಕೋರ್ಟ್ ವಿಚಾರಣೆ
ಬಳ್ಳಾರಿ : ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ಗಣಿಗಾರಿಕೆ ಮತ್ತು ಗಡಿ ಒತ್ತುವರಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಜಂಟಿ ವಿಚಾರಣೆ ನಡೆಸುವಂತೆ ಕೋರಲಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿರುವ ಬಳ್ಳಾರಿ ಕಾಯ್ದಿರಿಸಿದ ಅರಣ್ಯದಲ್ಲಿ ಒಟ್ಟು 13 ಗಣಿ ಗುತ್ತಿಗೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಕರ್ನಾಟಕ ಭಾಗದ ಏಳು ಹಾಗೂ ಆಂಧ್ರಪ್ರದೇಶ ಭಾಗದ ಆರು ಗಣಿ ಗುತ್ತಿಗೆಗಳು ಸೇರಿವೆ. ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಗುತ್ತಿಗೆ ಸಂಖ್ಯೆ 6ರ ವ್ಯಾಪ್ತಿಯಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಉಭಯ ರಾಜ್ಯಗಳ ಅರಣ್ಯಕ್ಕೆ ಅಪಾರ ಹಾನಿ ಉಂಟುಮಾಡಿದೆ ಎಂಬುದಾಗಿ ಆರೋಪಿಸಲಾಗಿದೆ.
ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು 2025ರ ಮೇ 6ರಂದು ನೀಡಿದ ತೀರ್ಪಿನಲ್ಲಿ, ಒಎಂಸಿ ಸಂಸ್ಥೆ ಹಾಗೂ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಸೇರಿದಂತೆ ಅದರ ನಿರ್ದೇಶಕರು ಅಕ್ರಮ ಗಣಿಗಾರಿಕೆ, ವಂಚನೆ ಮತ್ತು ಪಿತೂರಿ ನಡೆಸಿರುವುದು ಸಾಬೀತಾಗಿ ಶಿಕ್ಷೆಯಾಗಿತ್ತು. ಒಎಂಸಿ ಸಂಸ್ಥೆಯು 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರು ಅಕ್ರಮವಾಗಿ ಸಾಗಣೆ ಮಾಡಿದ್ದು, ಇದರಿಂದ ಸರ್ಕಾರಿ ಖಜಾನೆಗೆ 884 ಕೋಟಿ ರೂ. ನಷ್ಟವಾಗಿದೆ. 2011ರ ಕೇಂದ್ರ ಸಫಲ ಸಮಿತಿ (ಸಿಇಸಿ) ವರದಿಯಂತೆ ಒಎಂಸಿಯ 25.9 ಹೆಕ್ಟೇರ್, 39.5 ಹೆಕ್ಟೇರ್ ಮತ್ತು 68.5 ಹೆಕ್ಟೇರ್ ಗುತ್ತಿಗೆಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಹೀಗಾಗಿ ಈ ಮೂರು ಗುತ್ತಿಗೆಗಳನ್ನು ರದ್ದುಗೊಳಿಸಿ ಹಾಗೂ ನಷ್ಟ ವಸೂಲಿ ಮಾಡುವಂತೆ ನಿ. ನ್ಯಾ. ಸುಧಾಂಶು ದುಲಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆ.13ರಂದು ವಿಚಾರಣೆ : ಸದ್ಯ, ಒಎಂಸಿ ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಪ್ರಕರಣ ಸಂಬಂಧ ಆ.13ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇದರಲ್ಲಿ ಡಬ್ಲೂೃಪಿ.(ಸಿ) ನಂ. 562/2009 ಮತ್ತು ಡಬ್ಲ್ಯೂಪಿ(ಸಿ) ನಂ.7366/2010 ಅರ್ಜಿಗಳನ್ನು ಒಂದೇ ಪ್ರಕರಣವಾಗಿ ಪರಿಗಣಿಸಿ ಜಂಟಿ ವಿಚಾರಣೆ ನಡೆಸಬೇಕು. ಜತೆಗೆ ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ಉಂಟಾದ 884 ಕೋಟಿ ರೂ. ಗೂ ಹೆಚ್ಚಿನ ನಷ್ಟ ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು. 1896ರ ಗಡಿ ನಕ್ಷೆಯ ಆಧಾರದ ಮೇಲೆ ಹಳೆಯ ಗಡಿ ಗುರುತು ಮರುಸ್ಥಾಪಿಸಿ ಅರಣ್ಯ ಪ್ರದೇಶ ಸಂರಕ್ಷಿಸಬೇಕು ಎಂದು ದೂರುದಾರರು ಕೋರಿದ್ದಾರೆ.
ರೆಡ್ಡಿಗೆ ಅತಂಕ : ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಕುರಿತು ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದಂತೆ ತನಿಖೆ ನಡೆಸಿದ ನಿವೃತ್ತ ನ್ಯಾ. ಸುಧಾಂಶು ನೇತೃತ್ವದ ಸಮಿತಿಯೂ ಅತ್ಯಾಧುನಿಕ ಹೈಟೆಕ ಸರ್ವೇ ನಡೆಸಿತ್ತು. ಈ ಸರ್ವೇಯಲ್ಲಿ ಕರ್ನಾಟಕ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿತ್ತು. ಈ ಅಕ್ರಮದ ವಿವರಗಳ ಆಧಾರದ ಮೇಲೆ 2026ರ ಫೆ.23ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ನಿಲುವನ್ನು ತಳೆದಿತ್ತು. ಗಣಿ ಅಕ್ರಮದ ಕುರಿತು ಆರು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸುಪ್ರಿಂ ಕೋರ್ಟ್ ಆದೇಶಿಸಿತ್ತು. ತದನಂತರ ಸಮಿತಿಯಿಂದ ಯಾವುದೇ ಮಧ್ಯಂತರ ಅಥವಾ ಅಂತಿಮ ವರದಿ ಸಲ್ಲಿಕೆಯಾಗದ ಪರಿಣಾಮ ಮೇ.14ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಿದರು. ಸದ್ಯ, ಆ.13ರಂದು ನಡೆಯಲಿದ್ದು, ಎರಡು ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಲಿದೆ ಎಂಬುದು ಕಾದು ನೋಡಬೇಕಿದೆ. ಕೋಟ್ಯಂತರ ರೂ. ಮೌಲ್ಯದ ಅಕ್ರಮ ಗಣಿಗಾರಿಕೆ ಹಾಗೂ ಅಂತಾರಾಜ್ಯ ಗಡಿ ಒತ್ತುವರಿ ಹಗರಣದಲ್ಲಿ ಸಿಲುಕಿರುವ ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ತಾತ್ಕಲಿಕವಾಗಿ ರಿಲೀಫ್ ಸಿಕ್ಕಿತ್ತು, ಸದ್ಯ ವಿಚಾರಣೆಯಿಂದ ಅತಂಕ ಶುರುವಾಗಿದೆ ಎನ್ನಲಾಗಿದೆ.
"

ಕೋಟ್... ಗಣಿ ಅಕ್ರಮ ಹಾಗೂ ಒತ್ತುವರಿ ಸಂಬಂಧ ಎರಡು ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸುವಂತೆ ಕೋರಲಾಗಿದೆ.- ಟಪಾಲ್ ಗಣೇಶ್, ಅರ್ಜಿ ದೂರುದಾರ, ಬಳ್ಳಾರಿ.

==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net