ಬಳ್ಳಾರಿ : ಸಭೆಗಳಲ್ಲಿ ಸ್ವೀಕರಿಸಲಾದ ದೂರು, ನ್ಯೂನತೆಗಳನ್ನು ಗಂಭಿರವಾಗಿ ಪರಿಗಣಿಸಿ ಅವುಗಳಿಗೆ ಸೂಕ್ತ ಪರಿಹಾರ ತ್ವರಿತವಾಗಿ ಒದಗಿಸಲಾಗುವುದು. ಈಗಾಗಲೇ ಆಲಿಸಿದ ಹಾಗೂ ಸ್ವೀಕರಿಸಲಾದ ಅಹವಾಲುಗಳ ಕುರಿತ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿದರು.
ಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಕುಂದುಕೊರತೆಗಳ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಆಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೇರಿದ ಜನರ ನೂರಾರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 4,250 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಾನೂನು ಪ್ರಕ್ರಿಯೆಯ ನಾನಾ ಹಂತಗಳಲ್ಲಿವೆ. ಇದರ ಜತೆಗೆ ದಿನನಿತ್ಯ ಹೊಸ ದೂರುಗಳು ಕೂಡ ಆಯೋಗಕ್ಕೆ ಸಲ್ಲಿಕೆಯಾಗುತ್ತಿವೆ ಎಂದರು.
ಈಗಾಗಲೇ ರಾಜ್ಯದ 15 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಇದರೊಂದಿಗೆ, ಪ್ರತಿ ಗುರುವಾರ ಮತ್ತು ಶುಕ್ರವಾರದಂದು ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅಹವಾಲುಗಳನ್ನು ಆಲಿಸಿ, ಕೋರ್ಟ್ ಮತ್ತು ಕಚೇರಿ ಪ್ರಕ್ರಿಯೆಗಳ ಮೂಲಕ ಸುಮಾರು 800 ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ರಚನೆಯಾಗಿರುವ ಆಯೋಗವು ಈ ವರ್ಗದ ಜನರ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅವುಗಳ ಶೀಘ್ರ ಇತ್ಯರ್ಥಕ್ಕೆ ಬದ್ಧವಾಗಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತಿ ಜಿಲ್ಲೆಯಲ್ಲೂ ಆಯೋಗವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಸ್ಥಳದಲ್ಲೇ ಅಧಿಕಾರಿಗಳಿಂದ ವಿವರಣೆ ಕೇಳಿ, ಸೂಕ್ತ ಕ್ರಮ ಜರುಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರು ತಮ್ಮ ಗಂಭೀರವಾದ ಸಮಸ್ಯೆಗಳನ್ನು ಮಾತ್ರ ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಆಯೋಗದ ಗಮನಕ್ಕೆ ತರಬೇಕು. ಅರ್ಜಿದಾರರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಅಹವಾಲುಗಳನ್ನು ಸಲ್ಲಿಸಿದಲ್ಲಿ, ಪ್ರತಿಯೊಬ್ಬರ ಸಮಸ್ಯೆಗೂ ಸೂಕ್ತ ಸ್ಪಂದನೆ ಸಿಗಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮುಖಂಡರು ಶಿಕ್ಷಣ, ಸುಸಜ್ಜಿತ ವಸತಿ ನಿಲಯ, ಅತ್ಯಾಧುನಿಕ ಗ್ರಂಥಾಲಯ ನಿರ್ಮಾಣ ಬೇಡಿಕೆ, ಸಮುದಾಯದ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಬೇಡಿಕೆ, ಭೂಮಿ ಮಂಜೂರು ಸೇರಿದಂತೆ ವಿವಿಧ ಅಹವಾಲುಗಳನ್ನು ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀವನ್‌ರಾಮ್, ಮಹರ್ಷಿ ವಾಲ್ಮೀಕಿ ಮಹನೀಯರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಂವಿಧಾನ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.