ಬಳ್ಳಾರಿಯ ನೀರಾವರಿ ಇಲಾಖೆಯ ಕಚೇರಿಯಲ್ಲಿ ಇಂಜಿನಿಯರ್ ಎಸ್.ಕೆ.ಬಲ್ಲೂರಪ್ಪ ಅವರಿಗೆ ರೈತರಿಂದ ಮನವಿ ಸಲ್ಲಿಸಲಾಯಿತು. ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಐನಾಥ ರೆಡ್ಡಿ, ರೈತರಾದ ವೆಂಕಟೇಶ, ಉಪೇಂದ್ರ, ಭೀಮಯ್ಯ, ವೀರಾರೆಡ್ಡಿ, ರಾಜೇಶ, ನಾಗೇಂದ್ರ ಇದ್ದರು.
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆಗೊಳಿಸಿ 16 ದಿನಗಳು ಕಳೆದಿದ್ದರೂ, 13ನೇ ಎಚ್ಎಲ್ ಉಪ ಕಾಲುವೆಯಲ್ಲಿ ಕೊನೆ ಭಾಗದ ರೈತರಿಗೆ ಸರಿಯಾಗಿ ನೀರು ಹರಿಸಿ ಎಂಬುದಾಗಿ ರೈತರು ಗುರುವಾರ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಐನಾಥ ರೆಡ್ಡಿ ಮಾತನಾಡಿ, ಆ.11ರಂದು ಜಲಾಶಯದಿಂದ ನೀರು ಹರಿಸಲಾಗಿದ್ದರೂ, ಈವರೆಗೆ ಕೇವಲ 11 ಕಿ.ಮೀ.ವರೆಗೂ ನೀರು ತಲುಪಿಲ್ಲ. ಮೇಲ್ಭಾಗದ ಕಾಲುವೆಗಳ ಗೇಟ್‌ಗಳು ಹಾಳಾಗಿದ್ದರೂ ದುರಸ್ತಿ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇಲಾಖೆಯಲ್ಲಿ ಅನುದಾನದ ಕೊರತೆಯಿದೆ ಎಂದು ಹೊಣೆಗೆಡಿತದ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ತಾಲೂಕಿನ ದಮ್ಮೂರು, ಕೊರ್ಲಗುಂದಿ, ಕೋಳೂರು ಹಾಗೂ ವಿಜಯನಗರ ಕ್ಯಾಂಪ್ ಗ್ರಾಮಗಳ ರೈತರು ಡ ಸಂಕಷ್ಟ ಪಡುವಂತೆಯಾಗಿದೆ. ಜಮೀನುಗಳಲ್ಲಿ ಮೆಣಸಿನಕಾಯಿ ಸಸಿ ನೆಟ್ಟು 75 ದಿನಗಳಾಗಿವೆ. ಪ್ರಸ್ತುತ ನೀರಿಲ್ಲದೆ ಸಸಿಗಳ ಚೆಂಡುಗಳು ಒಣಗುತ್ತಿದ್ದು, ಬೆಳೆ ಸಂಪೂರ್ಣ ನಾಶವಾಗುವ ಭೀತಿಯಲ್ಲಿದೆ. ಇದರಿಂದ ಪ್ರತಿ ಎಕರೆಗೆ ಸುಮಾರು 40 ಸಾವಿರ ರೂ. ನಷ್ಟ ಅನುಭವಿಸುವಂತೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ರೈತರು ಟ್ಯಾಂಕರ್ ಮೂಲಕ ಜಮೀನುಗಳಿಗೆ ನೀರು ಹಾಯಿಸುವ ಪರಿಸ್ಥಿತಿ ಬಂದೊದಗಿದೆ. ಈ ಕುರಿತು ಆ.17ರಂದೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ಕೊನೆ ಭಾಗದ ಗ್ರಾಮಗಳಿಗೆ ಕಾಲುವೆ ನೀರು ಪೂರೈಸಿ ಬೆಳೆ ರಕ್ಷಿಸಬೇಕು ಎಂದು ರೈತರು ಆಗ್ರಹಿಸಿದರು.