ಬಳ್ಳಾರಿಯ ಡಿಎಚ್‌ಒ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ಎ.ಶಾಂತ, ಪದಾಧಿಕಾರಿಗಳಾದ ಎಂ.ಗೀತ, ಮಾಣಿಕ್ಯಮ್ಮ, ವಸಂತಮ್ಮ, ರೇಷ್ಮಾ, ಶಾಂತಮ್ಮ, ಹನುಮಂತಮ್ಮ, ಉಮಾದೇವಿ, ಅನಂತಲಕ್ಷ್ಮೀ, ಶಶಿಕಲಾ, ಎರೆಮ್ಮ ಇದ್ದರು.
ಬಳ್ಳಾರಿ : ಆಶಾ ಕಾರ್ಯಕರ್ತೆಯರೆ ನಾಲ್ಕು ತಿಂಗಳ ಪ್ರೋತ್ಸಾಹ ಧನ ಬಿಡುಗಡೆ ಒತ್ತಾಯಿಸಿ, ರಾಜ್ಯ ಸರ್ಕಾರ ವಿರುದ್ಧ ಇಲ್ಲಿನ ಡಿಎಚ್‌ಒ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಎ.ಶಾಂತಾ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಹಗಲಿರುಳು ಜನರಿಗೆ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸೇರಿದಂತೆ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಇವರಿಗೆ ಕಳೆದ ನಾಲ್ಕು ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆಯಾಗದೆ ಇರುವುದು ವಿಷಾದನೀಯವಾಗಿದೆ. ದಿನ ನಿತ್ಯ ಜೀವನ ನಡೆಸಲು, ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಪಾವತಿಸದೆ ಇರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ, ಸರ್ಕಾರ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳ ಪ್ರೋತ್ಸಾಹ ಧನ ಕೂಡಲೇ ಬಿಡುಗಡೆಗೊಳಿಸಬೇಕು. ಅಲ್ಲದೆ, ಪ್ರತಿ ತಿಂಗಳ ಐದನೇ ತಾರೀಖಿನೊಳಗೆ ವೇತನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಬಳಿಕ ಡಿಎಚ್‌ಒ ಡಾ.ವೈ.ರಮೇಶಬಾಬು ಅವರಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಎರಡು ದಿನದಲ್ಲಿ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎಂದು ಡಿಎಚ್‌ಒ ಭರವಸೆ ನೀಡಿದರು.