ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಮಾಡಿ

ಬೆಂಗಳೂರಿನಲ್ಲಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಕಂಪ್ಲಿಯ ಭಾರತೀಯ ಜನತಾ ಪಾರ್ಟಿ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ವಿಜಯಶಂಕರರೆಡ್ಡಿ, ಸಿದ್ದಾರ್ಥಗೌಡ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಕಂಪ್ಲಿಯ ಭಾರತೀಯ ಜನತಾ ಪಾರ್ಟಿ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ವಿಜಯಶಂಕರರೆಡ್ಡಿ, ಸಿದ್ದಾರ್ಥಗೌಡ ಉಪಸ್ಥಿತರಿದ್ದರು.
Published on
ಕಂಪ್ಲಿ: ಪಟ್ಟಣದ ಮೂಲಕ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಭಾರತೀಯ ಜನತಾ ಪಾರ್ಟಿ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಒತ್ತಾಯಿಸಿದರು. 
ಭಾನುವಾರ ಬೆಂಗಳೂರಿನಲ್ಲಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, 31.30 ಕಿ.ಮೀ. ಸಂಪರ್ಕಕ್ಕೆ 705.45 ಕೋಟಿ ರೂ.  ವೆಚ್ಚ ನಿಗದಿಪಡಿಸಲಾಗಿದೆ. ಮಾರ್ಗದ ನಿರ್ಮಾಣದಿಂದ ಬಳ್ಳಾರಿಗೆ ಸಂಚಾರ ಸುಗಮವಾಗಲಿದೆ. 
ಸದ್ಯ ಗಂಗಾವತಿಯಿಂದ ಬಳ್ಳಾರಿ 60 ಕಿ.ಮೀ. ದೂರದಲ್ಲಿದ್ದರೂ, ರೈಲ್ವೆ ಮೂಲಕ ಪ್ರಯಾಣಿಸಲು 28 ಕಿ.ಮೀ. ದೂರದ ಗಿಣಿಗೇರಾಕ್ಕೆ ತೆರಳಿ, ಅಲ್ಲಿಂದ ಬಳ್ಳಾರಿಗೆ ಹೋಗಬೇಕಿದೆ. ಇದರಿಂದ 119 ಕಿ.ಮೀ. ಸಂಚರಿಸಬೇಕಾಗಿ ಬರುತ್ತದೆ. ಸಮಯ ವ್ಯರ್ಥದ ಜತೆಗೆ ಇಂಧನ ವೆಚ್ಚ ಹಾಗೂ ಸರಕು ಸಾಗಣೆ ದರವೂ ಹೆಚ್ಚಾಗುತ್ತಿದೆ ಎಂದು ಗಮನಕ್ಕೆ ತಂದರು.
ಈ ಮಾರ್ಗ ನಿರ್ಮಾಣವಾದರೆ ಗಂಗಾವತಿಯಿಂದ ಬಳ್ಳಾರಿ, ಬೆಂಗಳೂರು, ಗುಂತಕಲ್ ಹಾಗೂ ಗುಂಟೂರು ನಗರಗಳಿಗೆ ನೇರ ಸಂಪರ್ಕ ದೊರೆಯಲಿದೆ. ಶ್ರೀಶೈಲ, ತಿರುಪತಿ ಹಾಗೂ ಗುಂತಕಲ್ ರೈಲ್ವೆ ಜಂಕ್ಷನ್‌ನಂತಹ ಧಾರ್ಮಿಕ ಹಾಗೂ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಸುಲಭವಾಗುತ್ತದೆ.
ಇದು ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೂ ನೆರವಾಗಲಿದೆ. ಆದ್ದರಿಂದ ಗಂಗಾವತಿ-ದರೋಜಿ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ವಿಜಯಶಂಕರರೆಡ್ಡಿ, ಸಿದ್ದಾರ್ಥಗೌಡ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net