ಕೂಡ್ಲಿಗಿ: ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದ ಕಂದಾಯ ಗ್ರಾಮಗಳಲ್ಲಿನ ವಸತಿ ಹಕ್ಕು ಪತ್ರಗಳಿಗೆ ನೋಂದಣಿ ಕಾರ್ಯ ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ಭಾನುವಾರ ನಡೆಯಿತು.
ತಾಲೂಕಿನ ಕೂಡ್ಲಿಗಿ ಹೋಬಳಿಯ-7, ಹೊಸಹಳ್ಳಿ ಹೋಬಳಿಯ-9, ಗುಡೇಕೋಟೆ ಹೋಬಳಿಯ-7 ಕಂದಾಯ ಗ್ರಾಮಗಳಿಂದ ಬಂದಿದ್ದ 250ಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಂದೇ ದಿನ ನೋಂದಣಿ ಮಾಡಿಸಲಾಯಿತು.
ಬೆಳಗ್ಗೆ ಆರಂಭವಾದ ನೋಂದಣಿ ರಾತ್ರಿಯಾದರೂ ಮುಂದುವರಿದಿತ್ತು. ಹೊಸ ಕಂದಾಯ ಗ್ರಾಮಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಸ್ತಾವನೆಗೊಂಡಿರುವ ಗ್ರಾಮಗಳ ಫಲಾನುಭವಿಗಳಿಗೆ ನೀಡಿದ ವಸತಿ ಹಕ್ಕು ಪತ್ರಗಳ ನೋಂದಣಿ ಕಾರ್ಯ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ನಿರ್ದೇಶನದಂತೆ ನಡೆಸಲಾಯಿತು.
ಜನವಸತಿ ಪ್ರದೇಶಗಳಲ್ಲಿ ದಾಖಲೆ ರಹಿತವಾಗಿ ವಾಸಿಸುತ್ತಿರುವ ನಿವಾಸಿಗರಿಗೆ 94ಡಿ ಅಧಿಸೂಚನೆಯಡಿಯಲ್ಲಿ ಹಕ್ಕುಪತ್ರದೊಂದಿಗೆ ಇ-ಸ್ವತ್ತು ವಿತರಿಸಲು ತಾಪಂ ಕಾರ್ಯನಿರ್ವಹಿಸಿತು ಎಂದು ತಹಸೀಲ್ದಾರ್ ವಿ.ಕೆ. ನೇತ್ರಾವತಿ ತಿಳಿಸಿದರು.
ಉಪಾಹಾರ ವ್ಯವಸ್ಥೆ: ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಫಲಾನುಭವಿಗಳಿಗೆ ತಹಸೀಲ್ದಾರ್ ವಿ.ಕೆ.ನೇತ್ರಾವತಿ ನೇತೃತ್ವದಲ್ಲಿ ತಾಲೂಕು ಆಡಳಿತದಿಂದ ಮಧ್ಯಾಹ್ನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಉಪ ತಹಸೀಲ್ದಾರ್ ರಾಘವೇಂದ್ರ, ಉಪ ನೋಂದಣಿ ಅಧಿಕಾರಿ ವೈಶಾಲಿ, ಕಂದಾಯ ನಿರೀಕ್ಷಕರಾದ ಕೂಡ್ಲಿಗಿ ತಳವಾರ ಪ್ರಭು, ಗುಡೇಕೋಟೆ ಮುರಳಿ ಕೃಷ್ಣ, ಹೊಸಹಳ್ಳಿ ಕೊಟ್ರೇಶ ಇತರರಿದ್ದರು.