ಕೃಷಿ ಭೂಮಿ ವಾಣಿಜ್ಯಕ್ಕೆ ಬಳಸಿದರೆ ಕ್ರಮ

ಹಂಪಿ ಪರಿಸರದಲ್ಲಿ ಅನಧಿಕೃತ ಹೋಂಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳ ಮೇಲೆ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿತು. ಹವಾಮ ಆಯುಕ್ತ ಇ.ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ತಾಪಂ ಇಒ ಆಲಂ ಪಾಷಾ ಇತರರಿದ್ದರು.
ಹಂಪಿ ಪರಿಸರದಲ್ಲಿ ಅನಧಿಕೃತ ಹೋಂಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳ ಮೇಲೆ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿತು. ಹವಾಮ ಆಯುಕ್ತ ಇ.ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ತಾಪಂ ಇಒ ಆಲಂ ಪಾಷಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧಿಕಾರ ಆಯುಕ್ತ ಇ. ಬಾಲಕೃಷ್ಣಪ್ಪ ಎಚ್ಚರಿಕೆ
  • ಅನಧಿಕೃತ ಹೋಂಸ್ಟೇಗಳ ಮೇಲೆ ದಾಳಿ

ಹೊಸಪೇಟೆ:

ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಅನಧಿಕೃತ ಹೋಂಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳ ಮಾಲೀಕರ ವಿರುದ್ಧ ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಾಮ) ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿದರು.

ಹವಾಮ ಆಯುಕ್ತ ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ತಾಪಂ ಇಒ ಆಲಂ ಪಾಷಾ ನೇತೃತ್ವದ ತಂಡ ಹಂಪಿ, ಹೊಸಹಂಪಿ, ಜನತಾ ಬಜಾರ್, ಕಡ್ಡಿರಾಂಪುರ ಹಾಗೂ ಕಮಲಾಪುರ ವ್ಯಾಪ್ತಿಯಲ್ಲಿ ದಿಢೀರ್ ಪರಿಶೀಲನೆ ನಡೆಸಿತು. ದಾಖಲೆಗಳಿಲ್ಲದೆ ನಡೆಯುತ್ತಿದ್ದ ಘಟಕಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಪರವಾನಗಿ ಪಡೆಯದೆ ನಡೆಸಲಾಗುತ್ತಿರುವ ಹೋಂಸ್ಟೇಗಳನ್ನು ತಕ್ಷಣ ಬಂದ್ ಮಾಡಬೇಕು. ನೇರ ಹಾಗೂ ಆನ್‌ಲೈನ್ ಬುಕಿಂಗ್ ಸಂಪೂರ್ಣವಾಗಿ ಸ್ಥಗಿತಗೊಳಿತು. ನಿಯಮ ಉಲ್ಲಂಘಿಸಿ ರೆಸಾರ್ಟ್ ನಡೆಸಿದರೆ ಕಾನೂನು ಕ್ರಮ ಜರುಗಿಸುವಾಗಿ ಎಚ್ಚರಿಸಿತು.
ಪ್ರಾಧಿಕಾರ ಆಯುಕ್ತ ಇ. ಬಾಲಕೃಷ್ಣಪ್ಪ ಮಾತನಾಡಿ, ವಸತಿ ಅಥವಾ ಕೃಷಿ ಉದ್ದೇಶಕ್ಕೆ ಭೂಮಿ ಬಳಕೆ ಅನುಮತಿ ಪಡೆದು, ವಾಣಿಜ್ಯಕ್ಕೆ ಬಳಸುವುದು ಕಾನೂನುಬಾಹಿರ. ನಿಯಮ ಉಲ್ಲಂಘಿಸಿರುವ ಘಟಕಗಳ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರ ಜತೆಗೆ ಕಟ್ಟಡಗಳನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.

ವಿದ್ಯುತ್ ದುರ್ಬಳಕೆಗೆ ನೋಟಿಸ್

ಕಡ್ಡಿರಾಂಪುರ ಬಳಿಯ ಜಮೀನೊಂದರಲ್ಲಿ ವೆಂಕಟೇಶ್ ಎಂಬುವವರು ಅನಧಿಕೃತವಾಗಿ ಹೋಂಸ್ಟೇ ನಿರ್ಮಿಸಿ, ಕೃಷಿ ಚಟುವಟಿಕೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ತಕ್ಷಣ ಜೆಸ್ಕಾಂ ಅಧಿಕಾರಿ ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸ್ಥಳದಲ್ಲೇ ನೋಟಿಸ್ ಜಾರಿ ಮಾಡಲಾಯಿತು.

ಮುಚ್ಚಳಿಕೆ ಪತ್ರ ಕಡ್ಡಾಯ:

ಅಧಿಕೃತ ಪರವಾನಗಿ ಸಿಗುವವರೆಗೆ ಯಾವುದೇ ಕಾರಣಕ್ಕೂ ಹೋಂಸ್ಟೇ ನಡೆಸುವುದಿಲ್ಲ ಎಂದು ಮಾಲೀಕರು ಡಿಸಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು. ಹಂಪಿ ನಿರ್ವಹಣಾ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಪಂಚಾಯಿತಿಯಿಂದ ಅಧಿಕೃತ ನಿರಾಕ್ಷೇಪಣಾ ಪತ್ರ ಪಡೆದು, ನಿಯಮಾನುಸಾರ ಪರವಾನಗಿ ಪಡೆದ ನಂತರವೇ ಉದ್ಯಮ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net