ಬಳ್ಳಾರಿಯ ಗ್ರಾಮೀಣ ಜೆಸ್ಕಾಂ ಗ್ರಾಮೀಣ ಉಪವಿಭಾಗದ ಕಚೇರಿ ಆವರಣದಲ್ಲಿ ಕೃಷಿ ಪಂಪಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ, ಎಐಕೆಕೆಎಂಎಸ್ ಸಂಘಟನೆಯಿಂದ ಪ್ರತಿಭಟಿಸಿದರು. ಪದಾಧಿಕಾರಿಗಳಾದ ಸಿದ್ದಲಿಂಗ, ವೀರೇಶ್‌ಗೌಡ, ಚಂದ್ರ, ಈರಣ್ಣ, ಬುಗ್ಗೇಶ್, ವೈ.ದೊಡ್ಡಬಸಪ್ಪ, ಕರಿಬಸವ, ಪ್ರಕಾಶ್‌ಗೌಡ ಇತರರಿದ್ದರು.
ಬಳ್ಳಾರಿ : ತಾಲೂಕಿನ ಹರಗಿನ ಡೋಣಿ ಗ್ರಾಮದ ರೈತರ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ ಒಂಬತ್ತರಿಂದ ಸಂಜೆ ನಾಲ್ಕ ಗಂಟೆವರೆಗೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ಜೆಸ್ಕಾಂ ಗ್ರಾಮೀಣ ಉಪವಿಭಾಗದ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಗೋವಿಂದ್ ಮಾತನಾಡಿ, ತಾಲೂಕಿನ ಅರ್ಧ ಭಾಗ ತುಂಗಾಭದ್ರ ನದಿ ನೀರಿಲ್ಲದೆ ಕೇವಲ ಮಳೆ ಹಾಗೂ ಬೋರ್‌ವೆಲ್‌ಗಳ ಮೇಲೆಯೇ ಅವಲಂಬಿತವಾಗಿದೆ. ಹರಗಿನಡೋಣಿ ಗ್ರಾಮವು ಅರಣ್ಯ ಪ್ರದೇಶದಿಂದ ಸುತ್ತುವರಿದಿರುವುದರಿಂದ ಸಂಜೆಯಾಗುತ್ತಿದ್ದಂತೆ ಕರಡಿ, ಚಿರತೆ, ಹಾವುಗಳಂತಹ ವಿಷಜಂತುಗಳು ಹಾಗೂ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿರುತ್ತದೆ.
ಆದ್ದರಿಂದ ರೈತರ ಜೀವ ರಕ್ಷಣೆ ಮತ್ತು ಬೆಳೆಗಳ ಹಿತದೃಷ್ಟಿಯಿಂದ ಹಗಲು ವೇಳೆಯಲ್ಲೇ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು. ವಿವಿಧ ಗ್ರಾಮಗಳಿಗೆ ಸೇರಿ ಒಬ್ಬರೇ ಲೈನ್‌ಮ್ಯಾನ್ ಇರುವುದರಿಂದ ಟಿಸಿ ದುರಸ್ತಿ ಸೇರಿದಂತೆ ಯಾವುದೇ ತಾಂತ್ರಿಕ ಸಮಸ್ಯೆಗಳು ಸಕಾಲಕ್ಕೆ ಬಗೆಹರಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.