ಹರಪನಹಳ್ಳಿ: ಐಬಿ ವೃತ್ತದ ಕಾಲನಿಗೆ ಸಮರ್ಪಕವಾಗಿ ನೀರು ಒದಗಿಸುವಂತೆ ಒತ್ತಾಯಿಸಿ ಸಿಪಿಐಎಂಎಲ್ ಪಕ್ಷದಿಂದ ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಸುರೇಶ್ ಕುಮಾರ್‌ಗೆ ಮನವಿ ಸಲ್ಲಿಸಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಸಂತೋಷ ಗುಳೇದಹಟ್ಟಿ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಉತ್ತಮವಾಗಿದ್ದ ನಲ್ಲಿಗಳನ್ನು ಒಡೆದು ನೀರಿನ ಅಭಾವ ಉಂಟುಮಾಡಿರುವುದೇ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ದೊಡ್ಡ ಸಾಧನೆ. ಕಳೆದೆರಡು ದಶಕಗಳಿಂದ ಹರಪನಹಳ್ಳಿ ನಗರಕ್ಕೆ ನೀರಿನ ಅಭಾವ ಆಗಿರಲಿಲ್ಲ.
ಆದರೆ, ಶಾಸಕಿ ಐಬಿ ವೃತ್ತದ ಅಭಿವೃದ್ಧಿ ನೆಪದಲ್ಲಿ ಚರಂಡಿಗಳನ್ನು ಅಗೆಸಿ ಕಾಲನಿಗೆ ನೀರು ಸರಬರಾಜು ಮಾಡುತ್ತಿದ್ದ ಪೈಪ್‌ಗಳನ್ನು ಒಡೆಸಿದ್ದಾರೆ. ಅದರಿಂದ ಕುಡಿವ ನೀರಿನ ಪೈಪ್ ಸೋರಿಕೆಯಾಗಿ ಕಾಲನಿ ಜನರು ನೀರಿನ ಅಭಾವ ಎದುರಿಸುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂದೇರ ಪರುಶುರಾಮ ಮಾತನಾಡಿ, ಅಭಿವೃದ್ಧಿ ಸಾರ್ವಜನಿಕರಿಗೆ ನೆಮ್ಮದಿ ಸಿಗುವಂತಿರಬೇಕೆ ವಿನಃ ತೊಂದರೆ ಆಗಬಾರದು. ಆದ್ದರಿಂದ ಕೂಡಲೇ ಪೈಪ್ ಲೈನ್ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.