ಬಳ್ಳಾರಿಯ ಜಿಪಂ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಗೋವಿಂದ್, ಪದಾಧಿಕಾರಿಗಳಾದ ಪಂಪಾಪತಿ, ಗುರಳ್ಳಿ ರಾಜ, ಬಸಣ್ಣ, ಹನುಮಂತ, ಈರಣ್ಣ, ರಾಧಮ್ಮ, ಹಂಪಮ್ಮ ಇತರರಿದ್ದರು.
ಬಳ್ಳಾರಿ : ಕೇಂದ್ರ ಸರ್ಕಾರದ ನೂತನ ವಿಬಿ ಜಿ ರಾಮ್ ಜಿ ಯೋಜನೆ ಕಾಯ್ದೆ ಖಂಡಿಸಿ, ಇಲ್ಲಿನ ಜಿಪಂ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಗ್ರಾಮೀಣ ಕೂಲಿಕಾರ್ಮಿಕರಿಗೆ ಮನರೇಗಾ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ನೂರು ದಿನ ಉದ್ಯೋಗ ನೀಡಬೇಕು. ವಿಬಿ ಜಿ ರಾಮ್ ಜಿ ಯೋಜನೆ ಜಾರಿಯಿಂದ ಕೂಲಿ ಕಾರ್ಮಿಕರ ಉದ್ಯೋಗ ಕಸಿದುಕೊಂಡಿದೆ. ಇದರಡಿ 125 ದಿನ ಕೆಲಸ ನೀಡುತ್ತೇವೆ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ, ಅದಕ್ಕೆ ಬೇಕಾದ ಹಣ ಒದಗಿಸುವಲ್ಲಿ, ಹಿಂದೆ ಸರಿದಿದ್ದಾರೆ. ಕೆಲಸ ನೀಡುವಲ್ಲಿ ಮೊದಲು ಗ್ರಾಮ ಪಂಚಾಯಿತಿಗಿಯಿದ್ದ ಅಧಿಕಾರವನ್ನು ಈಗ ಕಿತ್ತುಕೊಳ್ಳಲಾಗಿದೆ. ಶೇ. 60ರಷ್ಟು ಕೇಂದ್ರ ಹಾಗೂ ಶೇ.40 ರಷ್ಟು ರಾಜ್ಯ ಸರ್ಕಾರ ಕೊಡಬೇಕು ಎಂಬುದಾಗಿ ತಿಳಿಸಿದ್ದರು. ಆದರೆ ಕಾಯ್ದೆ ತಿದ್ದುಪಡಿ ಮಾಡುವಾಗ ಯಾವುದೇ ರಾಜ್ಯ ಸರ್ಕಾರಗಳ ಅಭಿಪ್ರಾಯ ತೆಗೆದುಕೊಳ್ಳದೆ, ಸರ್ವಾಧಿಕಾರಿ ಧೋರಣೆಯಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ. ಈ ಎಲ್ಲ ಅಂಶಗಳಿಂದ ಇದು ಕೂಲಿ ಕಾರ್ಮಿಕರ ವಿರೋಧಿ ನೀತಿಯಾಗಿದೆ. ಇದನ್ನು ನಾವೆಲ್ಲ ಸೇರಿ ವಿರೋಧಿಸಬೇಕು ಎಂದರು. ಬಳಿಕ ಸಿಇಒ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.