ಬಳ್ಳಾರಿ : ಜಿಲ್ಲೆಯಲ್ಲಿ ಒಂಬತ್ತು ವರ್ಷದಿಂದ ಹದಿನಾಲ್ಕು ವರ್ಷದೊಳಗಿನ ಹೆಣ್ಣುಮಕ್ಕಳಿಗೆ ನೀಡುವ ಹ್ಯೂಮನ್ ಪ್ಯಾಪಿಲೋಮ ವೈರಸ್(ಎಚ್‌ಪಿವಿ) ಲಸಿಕೆ ಮಾಹಿತಿಯನ್ನು ವ್ಯಾಪಕ ಪ್ರಚಾರಕೈಗೊಳ್ಳಿ ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಎಚ್‌ಪಿವಿ ಲಸಿಕೆ ಕುರಿತು ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಹೆಣ್ಣುಮಕ್ಕಳ ಜೀವನದಲ್ಲಿ ಗಂಭೀರತೆ ಉಂಟುಮಾಡುವ ಜತೆಗೆ ಜೀವನ ಪೂರ್ತಿ ಕೊರಗುವಿಕೆಗೆ ಕಾರಣವಾಗುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಲಸಿಕೆ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದರು.
ಜಿಲ್ಲಾ ಆರ್‌ಸಿಎಚ್ ಡಾ.ಹನುಮಂತಪ್ಪ ಮಾತನಾಡಿ, ಲೈಂಗಿಕ ಪಾಲುದಾರಿಕೆಯು ಗರ್ಭಕಂಠದ ಕ್ಯಾನ್ಸರ್ ಕಾರಣವಾಗಬಹುದಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯಕ್ಕೆ ಮಾರಕವಾದದ್ದು ತಡೆಯಲು ಎಚ್‌ಪಿವಿ ಲಸಿಕೆ ಮಹತ್ವಪೂರ್ಣವಾಗಿದೆ. ಹೆಣ್ಣುಮಕ್ಕಳಿಗೆ ವಯಸ್ಸಿಗನುಗುಣವಾಗಿ ಉಚಿತವಾಗಿ ಚುಚ್ಚುಮದ್ದು ರೂಪದಲ್ಲಿ ನೀಡುವುದನ್ನು ಶಾಲಾ ಮಟ್ಟದಲ್ಲಿ ಹಾಗೂ ಪಾಲಕರಿಗೂ ಮಾಹಿತಿ ಒದಗಿಸಲು ತಿಳಿಸಿದರು.